ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ತನಿಖೆ ವಿಳಂಬ: ತನಿಖಾ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ತರಾಟೆ

ಹೊಸದಿಲ್ಲಿ, ಅ. 25: ಸಂಸದರು ಹಾಗೂ ಶಾಸಕರು ಭಾಗಿಯಾಗಿರುವ ಪ್ರಕರಣಗಳ ತನಿಖೆಯ ವಿಳಂಬದ ಕುರಿತು ಸುಪ್ರೀಂ ಕೋರ್ಟ್ ಬುಧವಾರ ತನಿಖಾ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದೆ.
ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ಸಂಸದರು ಹಾಗೂ ಶಾಸಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ವಿಚಾರಣೆ ನಡೆಸಿತು.
ಬುಧವಾರ ಮನವಿಗಳ ವಿಚಾರಣೆ ಸಂದರ್ಭ ನ್ಯಾಯಾಲಯ, ಇಂತಹ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕುರಿತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಲ್ಲಿಸಿದ ಸ್ಥಿತಿ ಗತಿ ವರದಿ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿತು. ವರದಿಯಲ್ಲಿ ಪ್ರಸ್ತುತ 51 ಸಂಸದರು ಹಾಗೂ 71 ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ. ಈ ನಡುವೆ ಹಾಲಿ ಸಂಸದರು ಹಾಗೂ ಶಾಸಕರ ವಿರುದ್ಧದ 121 ಪ್ರಕರಣಗಳು ಸಿಬಿಐ ಮುಂದೆ ತನಿಖೆಗೆ ಬಾಕಿ ಇದೆ ಎಂದು ವರದಿ ಹೇಳಿದೆ.
‘‘ವರದಿ ಅಪೂರ್ಣವಾಗಿದೆ ಎಂದು ಹೇಳಲು ನಾವು ವಿಷಾದಿಸುತ್ತೇವೆ. 10-15 ವರ್ಷಗಳಿಂದ ಆರೋಪ ಪಟ್ಟಿ ಸಲ್ಲಿಸದಿರಲು ಯಾವುದೇ ಕಾರಣ ಇಲ್ಲ. ಇದರಲ್ಲಿ ಬಾಕಿ ಇರುವ ಅತಿ ಹಳೆಯ ಪ್ರಕರಣ 2010ರಷ್ಟು ಹಿಂದೆ ಹೋಗುತ್ತದೆ. ನಾವು ತನಿಖಾ ಸಂಸ್ಥೆಗಳ ನೈತಿಕ ಸ್ಥೈರ್ಯ ಕುಗ್ಗಿಸಲು ಬಯಸುವುದಿಲ್ಲ. ಅವರಿಗೂ ನ್ಯಾಯಾಧೀಶರಂತೆ ಹೊರೆ ಆಗುತ್ತದೆ ಎಂದು ರಮಣ ಹೇಳಿದರು.
ಹಲವು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ ಆರೋಪಿಗಳ ಸೊತ್ತನ್ನು ಮಾತ್ರ ಮುಟ್ಟುಗೋಲು ಹಾಕಿಕೊಂಡಿದೆ. ಆರೋಪ ಪಟ್ಟಿ ಸಲ್ಲಿಸದೇ ಆಸ್ತಿಯನ್ನು ಮಾತ್ರ ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಯಾವುದೇ ಉದ್ದೇಶ ಈಡೇರಿಸಲು ಸಾಧ್ಯವಿಲ್ಲ ಎಂದು ರಮಣ ಅವರು ಹೇಳಿದರು.







