ಬಹುಜನ ಚಳವಳಿಯ ಧ್ವನಿ ಗೇಲ್ ಓಮ್ವೆಟ್ ಇನ್ನಿಲ್ಲ

photo: twitter/@Prksh_Ambedkar
ಮುಂಬೈ, ಆ.26: ಬಹುಜನ ಚಳವಳಿ ಹಾಗೂ ಜಾತಿವಾದ ವಿರೋಧಿಸಿ ಹಲವಾರು ಪುಸ್ತಕಗಳನ್ನು ಬರೆದಿರುವ ಅಮೆರಿಕ ಸಂಜಾತೆ ಹಾಗೂ ಭಾರತೀಯ ವಿಷಯಗಳ ತಜ್ಞೆ ಗೈಲ್ ಓಮ್ವೆಡ್ ಬುಧವಾರ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಸೆಗಾಂವ್ ಗ್ರಾಮದಲ್ಲಿರುವ ತನ್ನ ನಿವಾಸದಲ್ಲಿ ನಿಧನರಾಗಿದ್ದಾರೆ. ಚಿಂತಕಿ ಹಾಗೂ ಬಹುಜನ ಚಳವಳಿಯ ಪ್ರಬಲ ಧ್ವನಿಯಾಗಿದ್ದ ಓಮ್ವೆಡ್ ಅವರು
ಅವರಿಗೆ 80 ವರ್ಷ ವಯಸ್ಸಾಗಿತ್ತು. ಗೇಲ್ ಓಮ್ವೆಡ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬುಧವಾರ ಕಾಸೆಗಾಂವ್ ಗ್ರಾಮದಲ್ಲಿ ನಡೆಯಿತು. ಓಮ್ವೆಡ್ ಅವರು ಕಳೆದ ಒಂದೂವರೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಭಾರತದಲ್ಲಿನ ಜಾತಿ ವ್ಯವಸ್ಥೆ ಹಾಗೂ ಅಮೆರಿಕದ ಜನಾಂಗೀಯವಾದವನ್ನು ಗೇಲ್ ಓಮ್ವೆಡ್ ಅವರು ಕಟುವಾಗಿ ವಿರೋಧಿಸಿದ್ದರು. ಭಾರತಾದ್ಯಂತ ವಿವಿಧ ಜನತಾ ಚಳವಳಿಗಳಲ್ಲಿ ಓಮ್ವೆಟ್ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ತನ್ನ ಪತಿ ಹಾಗೂ ಸಾಮಾಜಿಕ ಕಾರ್ಯಕರ್ತ ಭಾರತ್ ಪಟಾನ್ಕರ್ ಜೊತೆ ಅವರು ಬಡಕಾರ್ಮಿಕ ವರ್ಗಗಳ ಹಿತರಕ್ಷಣೆಗಾಗಿ ‘ಶ್ರಮಿಕ ಮುಕಿ’್ತ ಆಂದೋಲನವನ್ನು ಆರಂಭಿಸಿದ್ದರು.
ಅಮೆರಿಕದ ಮಿನ್ನಿಯಾಪೊಲಿಸ್ನಲ್ಲಿ ಜನಿಸಿದ ಗೇಲ್ ಓಮ್ವೆಡ್ ಅವರು ಕಾರ್ಲ್ಟನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. ಬರ್ಕ್ಲಿ ವಿವಿಯಲ್ಲಿ ಅಧ್ಯಯನ ಮುಂದುವರಿಸಿದ ಅವರು 1973ರಲ್ಲಿ ಸಮಾಜಶಾಸ್ತ್ರದಲ್ಲಿ ಪಿಎಚ್ಡಿ ಅಧ್ಯಯನ ಮಾಡಿದರು. 1983ರಲ್ಲಿ ಅವರು ಭಾರತದ ಪೌರತ್ವವನ್ನು ಸ್ವೀಕರಿಸಿದ್ದರು.
ಗೇಲ್ ಓಮ್ವೆಡ್ ಅವರ ವಸಾಹತುಶಾಹಿ ಸಮಾಜದಲ್ಲಿ ಸಾಂಸ್ಕೃತಿಕ ಕ್ರಾಂತಿ: ಪಶ್ಚಿಮ ಭಾರತದಲ್ಲಿ ಬ್ರಾಹ್ಮಣೇತರ ಸಾಂಸ್ಕೃತಿಕ ಚಳವಳಿ, 1873-1930 ಪ್ರಬಂಧವು ಭಾರೀ ಮನ್ನಣೆಯನ್ನು ಗಳಿಸಿತ್ತು.
ಓಮ್ಡಂ ಅವರು ಜಾತಿ, ವರ್ಗ ಹಾಗೂ ಲಿಂಗಭೇದ ವಿಷಯಗಳಿಗೆ ಸಂಬಂಧಿಸಿ ಹಲವಾರು ಪುಸ್ತಕಗಳು ಹಾಗೂ ಲೇಖನಗಳನ್ನು ಬರೆದಿದ್ದಾರೆ. ಅನೇಕ ಸಂಶೋಧನಾ ಪ್ರಾಜೆಕ್ಟ್ಗಳನ್ನು ಕೈಗೊಂಡಿರುವ ಜೊತೆಗೆ ಡಾ. ಗೇಲ್ ಓಮ್ವೆಡ್ ಅವರು ವಿಶ್ವಸಂಸ್ಥೆಯ ಆಹಾರ ಹಾಗೂ ಕೃಷಿ ಸಂಸ್ಥೆ (ಎಫಎಓ), ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ಹಾಗೂ ಬಡತನ ವಿರುದ್ಧ ಜಾಗತಿಕ ಹೋರಾಟ ಸಂಸ್ಥೆ ಎನ್ಓವಿಐಬಿಗೆ ಸಮಾಲೋಚಕರಾಗಿ ಕಾರ್ಯನಿರ್ವಹಿಸಿದ್ದರು. ಒಡಿಶಾದಲ್ಲಿನ ರಾಷ್ಟ್ರೀಯ ಸಾಮಾಜಿಕ ಕಾರ್ಯ ಹಾಗೂ ಸಮಾಜ ವಿಜ್ಞಾನ ಸಂಸ್ಥೆ (ನಿಸ್ವಾಸ್ಸ್)ನಲ್ಲಿನ ಡಾ. ಅಂಬೇಡ್ಕರ್ ಅಧ್ಯಯನ ಪೀಠದಲ್ಲಿ ಸೇವೆ ಸಲ್ಲಿಸಿದ್ದರು. ಪುಣೆ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು ಮತ್ತು ಕೋಪನ್ಹೆಗನ್ನ ಏಶ್ಯನ್ ಅಧ್ಯಯನಗಳ ನಾರ್ಡಿಕ್ ಸಂಸ್ಥೆಯಲ್ಲಿ ಅತಿಥಿ ಪ್ರೊಫೆಸರ್ ಆಗಿಯೂ ಕಾರ್ಯನಿರ್ವಹಿಸಿದ್ದರು.
ನೆಹರೂ ಸ್ಮಾರಕ ಮ್ಯೂಸಿಯಂ ಹಾಗೂ ಗ್ರಂಥಾಲಯದ ಹಿರಿಯ ಸಂಶೋಧಕಿಯಾಗಿದ್ದ ಅವರು ಕ್ರಾಂತಿವೀರ್ ಟ್ರಸ್ಟ್ನ ಸಂಶೋಧನಾ ನಿರ್ದೇಶಕಿಯಾಗಿಯೂ ಸೇವೆ ಸಲ್ಲಿಸಿದ್ದರು.
ಶಿಮ್ಲಾದಲ್ಲಿರುವ ಭಾರತೀಯ ಸುಧಾರಿತ ಅಧ್ಯಯನ ಸಂಸ್ಥೆಯ ಸಂಶೋಧಕಿಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಗೇಲ್ ಓಮ್ವೆಡ್ ಅವರು ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಾಮಾಜಿಕ ಬದಲಾವಣೆ ಕುರಿತ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠದ ಮಾಜಿ ಪ್ರೊಫೆಸರ್ ಕೂಡಾ ಆಗಿದ್ದರು.







