ಡ್ರೋನ್ ನಿಯಮಗಳ ಅಧಿಸೂಚನೆ ಪ್ರಕಟ
ಹೊಸದಿಲ್ಲಿ,ಆ.26: ನಾಗರಿಕ ವಾಯುಯಾನ ಸಚಿವಾಲಯವು ಡ್ರೋನ್ ನಿಯಮಗಳು,2021ರ ಅಧಿಸೂಚನೆಯನ್ನು ಹೊರಡಿಸಿದೆ. ಈ ನಿಯಮಗಳಡಿ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಬಳಕೆಗಾಗಿ ಭಾರೀ ಪೇಲೋಡ್ ಸಾಗಿಸುವ ಡ್ರೋನ್‌ಗಳು ಸೇರಿದಂತೆ ಮಾನವರಹಿತ ವಿಮಾನ ವ್ಯವಸ್ಥೆಯ ಒಟ್ಟು ತೂಕವನ್ನು 300 ಕೆ.ಜಿ.ಗಳಿಂದ 500 ಕೆ.ಜಿ.ಗಳಿಗೆ ಹೆಚ್ಚಿಸಲಾಗಿದೆ.
ಈ ನಿಯಮಗಳ ಪ್ರಮುಖ ವೈಶಿಷ್ಟಗಳಲ್ಲಿ ಸರಕು ಪೂರೈಕೆಗಾಗಿ ಡ್ರೋನ್ ಕಾರಿಡಾರ್‌ಗಳ ಅಭಿವೃದ್ಧಿಯು ಸೇರಿದೆ. ಉದ್ಯಮಸ್ನೇಹಿ ನಿಯಂತ್ರಣ ವ್ಯವಸ್ಥೆಯನ್ನೊದಗಿಸಲು ಮಾನವ ರಹಿತ ವಿಮಾನ ವ್ಯವಸ್ಥೆಗಳ ಉತ್ತೇಜನ ಮಂಡಳಿಯನ್ನು ಸ್ಥಾಪಿಸಲಾಗುವುದು.
ನೂತನ ನಿಯಮಗಳು ಡ್ರೋನ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿವೆ. ಅವು ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಟಾರ್ಟ್-ಅಪ್‌ಗಳಿಗೆ ಮತ್ತು ಯುವಜನರಿಗೆ ಹೆಚ್ಚಿನ ನೆರವು ನೀಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.
ಡ್ರೋನ್‌ಗಳ ಕಾರ್ಯಾಚರಣೆಯ ವಿಧಿವಿಧಾನಗಳನ್ನು ಸರಳಗೊಳಿಸುವುದು ಮತ್ತು ಪಾಲನಾ ಹೊರೆಯನ್ನು ತಗ್ಗಿಸುವುದು ಈ ನಿಯಮಗಳ ಉದ್ದೇಶವಾಗಿದೆ ಎಂದು ನಾಗರಿಕ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ಟ್ವೀಟಿಸಿದ್ದಾರೆ.
ನೂತನ ನಿಯಮಗಳಡಿ ಡ್ರೋನ್‌ಗಳ ನೋಂದಣಿ ಅಥವಾ ಪರವಾನಿಗೆ ವಿತರಣೆಗೆ ಮುನ್ನ ಯಾವುದೇ ಭದ್ರತಾ ಅನುಮತಿ ಅಗತ್ಯವಾಗುವುದಿಲ್ಲ. ಅಗತ್ಯ ನಮೂನೆಗಳು ಅಥವಾ ಅನುಮತಿಗಳ ಸಂಖ್ಯೆಯನ್ನು 25ರಿಂದ ಕೇವಲ ಐದಕ್ಕೆ ಇಳಿಸಲಾಗಿದೆ. ವಾಣಿಜ್ಯೇತರ ಬಳಕೆಗಾಗಿ ನ್ಯಾನೋ ಮತ್ತು ಮೈಕ್ರೋ ಡ್ರೋನ್‌ಗಳ ಕಾರ್ಯಚರಣೆಗಳಿಗೆ ಪೈಲಟ್ ಪರವಾನಿಗೆಯು ಅಗತ್ಯವಿಲ್ಲ. ಡ್ರೋನ್‌ಗಳ ಆಮದನ್ನು ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯವು ನಿಯಂತ್ರಿಸಲಿದೆ. ಭಾರತೀಯ ಡ್ರೋನ್ ಕಂಪನಿಗಳಲ್ಲಿ ವಿದೇಶಿ ಒಡೆತನಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ.







