ಇನ್ನೂ 1,500 ಅಮೆರಿಕನ್ನರು ಸ್ಥಳಾಂತರಕ್ಕೆ ಬಾಕಿ: ಅಮೆರಿಕ ಮಾಧ್ಯಮ ವರದಿ
ವಾಷಿಂಗ್ಟನ್, ಆ.26: ತಾಲಿಬಾನಿಗಳ ನಿಯಂತ್ರಣದಲ್ಲಿರುವ ಅಫ್ಗಾನ್ನಲ್ಲಿ ಇನ್ನೂ ಸುಮಾರು 1,500 ಅಮೆರಿಕನ್ನರಿದ್ದು, ಆತ್ಮಹತ್ಯಾ ಬಾಂಬ್ ದಾಳಿಯ ಬೆದರಿಕೆಯ ನಡುವೆಯೂ ಗುರುವಾರ ಬೆಳಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ ಸುಮಾರು 13,400 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಇದರಲ್ಲಿ 5,100 ಮಂದಿಯನ್ನು ಅಮೆರಿಕದ ಸೇನಾ ವಿಮಾನಗಳಲ್ಲಿ, 8,300 ಮಂದಿಯನ್ನು ಮಿತ್ರರಾಷ್ಟ್ರಗಳ ವಿಮಾನದಲ್ಲಿ ತೆರವುಗೊಳಿಸಲಾಗಿದೆ. ಬುಧವಾರ ಸುಮಾರು 19,000 ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಇನ್ನೂ ಸುಮಾರು 1,500 ಮಂದಿ ಸ್ಥಳಾಂತರಕ್ಕೆ ಬಾಕಿಯಿದ್ದು ಇದರಲ್ಲಿ ಮಹಿಳಾ ನ್ಯಾಯವಾದಿಗಳು, ಪತ್ರಕರ್ತರು, ಈ ಹಿಂದೆ ಅಮೆರಿಕ ಮತ್ತು ನೇಟೋ ಪಡೆಗಳ ಪರ ಕಾರ್ಯನಿರ್ವಹಿಸಿದ್ದ ಅಫ್ಗಾನೀಯರು ಸೇರಿದ್ದಾರೆ ಎಂದು ವರದಿ ಹೇಳಿದೆ.
ಅಮೆರಿಕನ್ನರನ್ನು ತೆರವುಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಜೊತೆಗೆ, ಕಾರುಬಾಂಬ್ ದಾಳಿ, ಆತ್ಮಹತ್ಯಾ ಬಾಂಬ್ ದಾಳಿಯ ಬೆದರಿಕೆಯ ಮಧ್ಯೆ ಕಾಬೂಲ್ ವಿಮಾನ ನಿಲ್ದಾಣಕ್ಕೆ ಬರಲು ಯಶಸ್ವಿಯಾಗುವ ಅಫ್ಗಾನೀಯರನ್ನೂ ಆಗಸ್ಟ್ 31ರೊಳಗೆ ತೆರವುಗೊಳಿಸಬೇಕಾಗಿದೆ ಎಂದು ಅಮೆರಿಕದ ವಿದೇಶ ವ್ಯವಹಾರ ಸಚಿವ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.
ವಿಮಾನ ನಿಲ್ದಾಣದ ಮೇಲೆ ದಾಳಿಯ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಲಭ್ಯ: ಬ್ರಿಟನ್
ಅಫ್ಗಾನ್ ನಿಂದ ಪ್ರಜೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಅಮೆರಿಕ ಮುಂದುವರಿಸಿದ್ದರೂ, ಬಹುತೇಕ ಇತರ ದೇಶಗಳು ತಮ್ಮ ಪ್ರಜೆಗಳ ಸ್ಥಳಾಂತರ ಕಾರ್ಯ ಮುಕ್ತಾಯಗೊಳಿಸುವ ಹಂತದಲ್ಲಿದೆ. ಈ ಮಧ್ಯೆ, ವಿಮಾನ ನಿಲ್ದಾಣದ ಮೇಲೆ ತಕ್ಷಣ ದಾಳಿಯಾಗುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಲಭಿಸಿರುವುದಾಗಿ ಬ್ರಿಟನ್ನ ಸಶಸ್ತ್ರ ಪಡೆಗಳ ಸಚಿವ ಜೇಮ್ಸ್ ಹೀಪ್ಪೆಯವರನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.
ಅಫ್ಗಾನ್ ನ ಮೂರು ನಿರ್ಧಿಷ್ಟ ವಿಮಾನ ನಿಲ್ದಾಣದ ಪ್ರವೇಶದ್ವಾರದಿಂದ ದೂರ ಇರುವಂತೆ ಕಾಬೂಲ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬುಧವಾರ ತನ್ನ ಪ್ರಜೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ವಿಮಾನ ನಿಲ್ದಾಣದ ಮೇಲೆ ಕಾರ್ ಬಾಂಬ್ ದಾಳಿ ನಡೆಸುವ ಬಗ್ಗೆ ಐಸಿಸ್ ಉಗ್ರರು ಬೆದರಿಕೆ ಹಾಕಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.







