ಅಫ್ಘಾನ್ ನಲ್ಲಿನ ಭಾರತೀಯ ಸಿಬ್ಬಂದಿಯ ತೆರವು ಕಾರ್ಯಾಚರಣೆಗೆ ಪ್ರಥಮ ಆದ್ಯತೆ: ಸರ್ವಪಕ್ಷ ಸಭೆಯಲ್ಲಿ ಜೈಶಂಕರ್

ಹೊಸದಿಲ್ಲಿ, ಆ.26: ಅಪ್ಘಾನಿಸ್ತಾನದಲ್ಲಿ ಅತ್ಯಂತ ಚಿಂತಾಜನಕ ಪರಿಸ್ಥಿತಿಯಿದ್ದು, ಅಲ್ಲಿಂದ ಭಾರತೀಯ ಸಿಬ್ಬಂದಿಯನ್ನು ತೆರವುಗೊಳಿಸುವುದು ತನ್ನ ಪ್ರಥಮ ಆದ್ಯತೆಯಾಗಿದೆ ಎಂದು ಕೇಂದ್ರ ಸರಕಾರ ಗುರುವಾರ ತಿಳಿಸಿದೆ. ಅಫ್ಘಾನ್ ಪರಿಸ್ಥಿತಿಯ ಬಗ್ಗೆ ವಿವರಿಸಲು ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ವಿದೇಶಾಂಗ ವ್ಯವಹಾರ ಸಚಿವ ಜೈಶಂಕರ್ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರು ಕಳೆದ ವಾರ ಅಧಿಕಾರವನ್ನು ವಶಪಡಿಸಿಕೊಂಡ ಆನಂತರದ ವಿದ್ಯಮಾನಗಳನ್ನು ವಿವರಿಸಿದರು.
ಜೈಶಂಕರ್ ಜೊತೆಗೆ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ನಾಯಕ ಪಿಯೂಶ್ ಗೋಯಲ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೂಡಾ ಉಪಸ್ಥಿತರಿದ್ದರು.
ಅಫ್ಘಾನಿಸ್ತಾನದಿಂದ ಸಾಧ್ಯವಿದ್ದಷ್ಟು ಸಂಖ್ಯೆಯಲ್ಲಿ ಜನರನ್ನು ತೆರವುಗೊಳಿಸಲು ಭಾರತವು ಯತ್ನಿಸುತ್ತಿದೆ ಹಾಗೂ ಭಾರತೀಯ ಸಿಬ್ಬಂದಿಯನ್ನು ತೆರವುಗೊಳಿಸುವುದು ಸರಕಾರದ ಅತಿ ದೊಡ್ಡ ಆದ್ಯತೆಯಾಗಿದೆಯೆಂದು ಜೈಶಂಕರ್ ತಿಳಿಸಿದರು.
ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿಯು ತುಂಬಾ ಗಂಭೀರವಾಗಿದೆ ಎಂದು ಸಭೆಯಲ್ಲಿ ಕೇಂದ್ರ ಸರಕಾರವು ಬಣ್ಣಿಸಿತಲ್ಲದೆ, ದೋಹಾ ಒಪ್ಪಂದದಲ್ಲಿ ತಾನು ನೀಡಿದ್ದ ಭರವಸೆಯನ್ನು ್ನ ತಾಲಿಬಾನ್ ಮುರಿದಿದೆಯೆಂದು ಅವರು ತಿಳಿಸಿದರು.
2020ರಲ್ಲಿ ಕತರ್ ರಾಜಧಾನಿದೋಹಾದಲ್ಲಿ ಅಮೆರಿಕ ಹಾಗೂ ತಾಲಿಬಾನ್ ನಾಯಕರ ಜೊತೆ ಏರ್ಪಟ್ಟ ಒಪ್ಪಂದದಲ್ಲಿ ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಸ್ವಾತಂತ್ರ, ಪ್ರಜಾಪ್ರಭುತ್ವ ಹಾಗೂ ಅಫ್ಘಾನ್ ಸಮಾಜದ ಎಲ್ಲಾ ವರ್ಗಗಳನ್ನು ಪ್ರತಿನಿಧಿಸುವಂತಹ ಸರಕಾರದ ಸ್ಥಾಪನೆಯನ್ನು ಪ್ರತಿಪಾದಿಸಲಾಗಿತ್ತು.







