ವರದಿ ಮಾಡುತ್ತಿದ್ದ ಪತ್ರಕರ್ತನನ್ನು ಥಳಿಸಿದ ತಾಲಿಬಾನಿಗಳು
ಕಾಬೂಲ್, ಆ.26: ಅಫ್ಗಾನಿಸ್ತಾನದ ಕಾಬೂಲ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಫ್ಗಾನ್ನ ಟಿವಿ ವಾಹಿನಿ ಟೋಲೊ ನ್ಯೂಸ್ ನ ಪತ್ರಕರ್ತನನ್ನು ತಾಲಿಬಾನ್ಗಳು ಥಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಮಧ್ಯೆ, ತಾಲಿಬಾನ್ಗಳ ಹಲ್ಲೆಯಿಂದ ಟೋಲೊ ನ್ಯೂಸ್ ಪತ್ರಕರ್ತ ಝಿಯರ್ ಖಾನ್ ಯಾದ್ ಮೃತಪಟ್ಟಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ವರದಿ ಸರಿಯಲ್ಲ, ಟೋಲೋ ನ್ಯೂಸ್ ನ ಟ್ವೀಟ್ ಅನ್ನು ತಪ್ಪಾಗಿ ಭಾಷಾಂತರಿಸಿದ್ದರಿಂದ ಈ ಅಚಾತುರ್ಯವಾಗಿದೆ. ಪತ್ರಕರ್ತನ ಮೇಲೆ ಹಲ್ಲೆ ನಡೆದಿರುವುದು ನಿಜ ಎಂದು ಟೋಲೋ ನ್ಯೂಸ್ ಹೇಳಿದೆ.
ಕಾಬೂಲ್ ನ ನ್ಯೂಸಿಟಿಯಲ್ಲಿ ವರದಿಗಾರಿಕೆಗೆಂದು ತೆರಳಿದ್ದ ತನ್ನ ಮೇಲೆ ತಾಲಿಬಾನ್ಗಳು ಹಲ್ಲೆ ನಡೆಸಿ ಮೊಬೈಲ್ ಫೋನ್ ಹಾಗೂ ಇತರ ಸಾಧನಗಳನ್ನು ವಶಕ್ಕೆ ಪಡೆದಿದ್ದಾರೆ. ಏಕಾಏಕಿ ಹಲ್ಲೆ ನಡೆಸಿರುವುದಕ್ಕೆ ಕಾರಣ ತಿಳಿದಿಲ್ಲ. ತಾಲಿಬಾನಿಗಳ ಇಂತಹ ಕೃತ್ಯಗಳು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಎದುರಾದ ಗಂಭೀರ ಬೆದರಿಕೆಯಾಗಿದೆ ಎಂದು ಝಿಯರ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಅಫ್ಗಾನ್ನಲ್ಲಿ ಕಳೆದ ಕೆಲವು ವರ್ಷಗಳಿಂದ ಹೊರಹೊಮ್ಮಿರುವ ನೂತನ ತಲೆಮಾರಿನ ಯುವಮುಖಂಡರು, ಪತ್ರಕರ್ತರು ಹಾಗೂ ಮಹಿಳೆಯರು ತೀವ್ರ ಭೀತಿಯನ್ನು ಎದುರಿಸುತ್ತಿದ್ದಾರೆ. ಅಲ್ಲಿನ ವಿಭಿನ್ನ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರೂ ಹಿಂಸಾಚಾರ ಮತ್ತು ದಬ್ಬಾಳಿಕೆಯ ಅಪಾಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕು ವಿಭಾಗದ ಮುಖ್ಯಸ್ಥ ಮೈಕೆಲ್ ಬ್ಯಾಷ್ಲೆಟ್ ಮಂಗಳವಾರ ಹೇಳಿದ್ದರು.
ತಾಲಿಬಾನಿಗಳು ಮನೆಮನೆಗೆ ತೆರಳಿ ಈ ಹಿಂದಿನ ಅಫ್ಗಾನ್ ಸರಕಾರದಲ್ಲಿ ಕಾರ್ಯ ನಿರ್ವಹಿಸಿದ್ದವರು ಅಥವಾ ನೇಟೋ ರಾಷ್ಟ್ರಗಳ ಪರ ಕಾರ್ಯನಿರ್ವಹಿಸಿದವರನ್ನು ಹುಡುಕುತ್ತಿದ್ದು, ತಾಲಿಬಾನಿಗಳಿಂದ ಅಪಾಯ ಎದುರಿಸುತ್ತಿರುವ ವ್ಯಕ್ತಿಗಳ ಪ್ರಮಾಣ ಅಧಿಕವಾಗಿದೆ ಎಂದು ಬಿಬಿಸಿ ಶುಕ್ರವಾರ ವರದಿ ಮಾಡಿತ್ತು.







