ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಗ್ರರ ದಾಳಿ: ಮೃತರ ಸಂಖ್ಯೆ ಕನಿಷ್ಠ 73
13 ಮಂದಿ ಅಮೆರಿಕನ್ ಸೈನಿಕರು, 60 ಮಂದಿ ಅಪ್ಘನ್ನರು ಬಲಿ

Photo source: PTI
ಕಾಬೂಲ್, ಆ.27: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಗುರುವಾರ ಆತ್ಮಹತ್ಯಾ ದಾಳಿಕೋರರು ಮತ್ತು ಇಬ್ಬರು ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 73 ಆಗಿದೆ. 60 ಮಂದಿ ಅಪ್ಘನ್ನರು ಮತ್ತು 13 ಮಂದಿ ಅಮೆರಿಕನ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಫ್ಘಾನ್ ಮತ್ತು ಅಮೆರಿಕ ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತಿದೆ. ಈ ದಾಳಿಯನ್ನು ತಾನೇ ನಡೆಸಿದ್ದಾಗಿ ಸಂಘಟನೆಯ ಅಮಕ್ ಸುದ್ದಿಸಂಸ್ಥೆ ಟೆಲಿಗ್ರಾಂ ಚಾನೆಲ್ ಮೂಲಕ ಬಹಿರಂಗಪಡಿಸಿದೆ. ಅಫ್ಘಾನಿಸ್ತಾನದಲ್ಲಿ ಐಎಸ್ ಸಂಘಟನೆ, ಇತ್ತೀಚೆಗೆ ಮಿಂಚಿನ ದಾಳಿಯಲ್ಲಿ ಅಫ್ಘಾನ್ ಆಡಳಿತಸೂತ್ರವನ್ನು ಹಿಡಿದ ತಾಲಿಬಾನ್ಗಿಂತಲೂ ಕ್ರಾಂತಿಕಾರಕವಾಗಿದೆ.
ಮೃತಪಟ್ಟವರಲ್ಲಿ 12 ಮಂದಿ ಸಾಗರ ಸೈನಿಕರು ಮತ್ತು ಒಬ್ಬ ನೌಕಾಪಡೆ ಯೋಧ ಸೇರಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. 12 ಮಂದಿ ಸೇವಾ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 140ಕ್ಕೂ ಹೆಚ್ಚು ಮಂದಿ ಅಫ್ಘನ್ನರು ದಾಳಿಯಲ್ಲಿ ಗಾಯಗೊಂಡಿದ್ದಾಗಿ ಅಫ್ಘಾನ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಒಬ್ಬ ದಾಳಿಕೋರ ಮೊಣಕಾಲು ಆಳದ ತ್ಯಾಜ್ಯ ನೀರಿನ ಚರಂಡಿಯಲ್ಲಿ ಸುಡುಬಿಸಿಲಲ್ಲಿ ನಿಂತಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿ ದೇಹಗಳನ್ನು ಕೊಳಚೆ ನೀರಿಗೆ ಎಸೆದಿದ್ದಾನೆ ಎನ್ನಲಾಗಿದೆ. ಅಫ್ಘಾನಿಸ್ತಾನದಿಂದ ಹೊರಹೋಗಲು ವಿಮಾನವೇರುವ ನಿರೀಕ್ಷೆಯಲ್ಲಿದ್ದ ಜನ, ರಕ್ತಸಿಕ್ತ ಬಟ್ಟೆಯೊಂದಿಗೆ ಹತಾಶೆಯಿಂದ ಗಾಯಾಳುಗಳನ್ನು ಆ್ಯಂಬುಲೆನ್ಸ್ಗಳಲ್ಲಿ ಒಯ್ಯುತ್ತಿರುವ ಹೃದಯವಿದ್ರಾವಕ ದೃಶ್ಯ ಕಂಡುಬಂತು.







