ಕೋವಿಡ್ ಸೋಂಕು: ಈಗ ದಕ್ಷಿಣ ರಾಜ್ಯಗಳಲ್ಲೇ ಅತ್ಯಧಿಕ

ಹೊಸದಿಲ್ಲಿ, ಆ.27: ದೇಶದಲ್ಲಿ ಕೋವಿಡ್-19 2ನೇ ಅಲೆಯ ಅಬ್ಬರದ ಬಳಿಕ ದೇಶಾದ್ಯಂತ ಪ್ರಕರಣಗಳ ಸಂಖ್ಯೆ ತ್ವರಿತವಾಗಿ ಇಳಿಮುಖವಾಗಿದ್ದರೂ, ದಕ್ಷಿಣ ರಾಜ್ಯಗಳಲ್ಲಿ ಮಾತ್ರ ಇತ್ತೀಚಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಓಣಂ ಹಬ್ಬದ ಬಳಿಕ ಕೇರಳದ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ.
ಬುಧವಾರ ಕೇರಳದಲ್ಲಿ 31,445 ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಪೈಕಿ ಮೂರನೇ ಎರಡರಷ್ಟು ಪ್ರಕರಣಗಳು ಇಲ್ಲಿಂದಲೇ ವರದಿಯಾಗಿವೆ. ತಮಿಳುನಾಡಿನಲ್ಲಿ ಮೇ 27ರಂದು 33,361 ಪ್ರಕರಣಗಳು ದಾಖಲಾದ್ದನ್ನು ಹೊರತುಪಡಿಸಿದರೆ ಮೂರು ತಿಂಗಳಲ್ಲಿ ದೇಶದ ಯಾವುದೇ ರಾಜ್ಯದಲ್ಲಿ ದಾಖಲಾದ ಅತಿಹೆಚ್ಚು ಪ್ರಕರಣ ಇದಾಗಿದೆ.
ಕೇರಳ ಹೊಸ ಪ್ರಕರಣಗಳು ಅತ್ಯಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ರಾಜ್ಯವಾಗಿದ್ದು, ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಅಧಿಕ ಜನಸಂಖ್ಯೆ ಹೊಂದಿದ ಇತರ ರಾಜ್ಯಗಳು ಬಹುತೇಕ ದಕ್ಷಿಣ ಭಾರತದ ರಾಜ್ಯಗಳು. ಕೇರಳದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 561 ಪ್ರಕರಣಗಳು ವರದಿಯಾದರೆ, ಮಹಾರಾಷ್ಟ್ರದಲ್ಲಿ ಇದು ಪ್ರತಿ 10 ಲಕ್ಷ ಜನಸಂಖ್ಯೆಗೆ 37 ಆಗಿದೆ. ಆಂಧ್ರ ಪ್ರದೇಶದಲ್ಲಿ 25, ತಮಿಳುನಾಡಿನಲ್ಲಿ 22, ಒಡಿಶಾದಲ್ಲಿ 20, ಕರ್ನಾಟಕದಲ್ಲಿ 20 ಹಾಗೂ ತೆಲಂಗಾಣದಲ್ಲಿ 9 ಪ್ರಕರಣಗಳ ಪ್ರತಿ 10 ಲಕ್ಷ ಮಂದಿಯ ಪೈಕಿ ವರದಿಯಾಗುತ್ತಿವೆ.
ರವಿವಾರ ಕೊನೆಗೊಂಡ ವಾರದಲ್ಲಿ ಒಟ್ಟು ದಾಖಲಾದ ಪ್ರಕರಣಗಳ ಸಂಖ್ಯೆ ಪ್ರತಿ ಹತ್ತು ಲಕ್ಷಕ್ಕೆ 24ರಿಂದ 25.3ಕ್ಕೆ ಹೆಚ್ಚಳವಾಗಿದೆ. ಇದಕ್ಕೆ ಮುಖ್ಯವಾಗಿ ಕೇರಳದಲ್ಲಿ ಸಂಖ್ಯೆ ಏರಿಕೆಯಾಗಿರುವುದು ಕಾರಣ. ಇದೇ ಅವಧಿಯಲ್ಲಿ ಏಳು ದಿನಗಳ ಸರಾಸರಿ ಸಾವಿನ ಸಂಖ್ಯೆ ಶೇಕಡ 10ರಷ್ಟು ಹೆಚ್ಚಳವಾಗಿದೆ.







