ಬಿಹಾರ: ಶೌಚಗುಂಡಿಯೊಳಗೆ ಉಸಿರುಗಟ್ಟಿ ನಾಲ್ವರು ಮೃತ್ಯು

ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಶೌಚಗುಂಡಿಯೊಳಗೆ ನಾಲ್ಕು ಜನರು ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಗುರುವಾರ ಸಂಜೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಪೊಲೀಸರ ಪ್ರಕಾರ, ಕೊತ್ವಾ ಬ್ಲಾಕ್‌ನ ಅಹಿರೌಲಿಯಾ ಪಂಚಾಯತ್ ವ್ಯಾಪ್ತಿಯ ಕುಮಹಾರ್ ಟೋಲಿ ಎಂಬಲ್ಲಿ ಸಂಜೆ 6.30 ರ ಸುಮಾರಿಗೆ ಅಮಿತ್ ಕುಮಾರ್ (6) ಎಂಬ ಮಗು ಆಕಸ್ಮಿಕವಾಗಿ ಟ್ಯಾಂಕ್ ಗೆ ಬಿದ್ದ ಘಟನೆ ಸಂಭವಿಸಿದೆ. "ಮಗುವನ್ನು ರಕ್ಷಿಸಲು ಧಾವಿಸಿದ ನಾಲ್ಕು ಜನರು ಟ್ಯಾಂಕ್‌ಗೆ ಪ್ರವೇಶಿಸಿ ಪ್ರಜ್ಞಾಹೀನರಾದರು" ಎಂದು ಕೊತ್ವಾ ಪೊಲೀಸ್ ಠಾಣೆಯ ನಿತಿನ್ ಕುಮಾರ್ ಹೇಳಿದರು.
"ನಾಲ್ವರನ್ನು ಶೌಚಗುಂಡಿಯಿಂದ ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಹಾಗೂ ಅಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಇನ್ನಿಬ್ಬರು ಸಾವನ್ನಪ್ಪಿದರು" ಎಂದು ಅಹಿರೌಲಿಯಾ ಪಂಚಾಯತ್‌ನ ಗ್ರಾಮ ಮುಖ್ಯಸ್ಥೆಯ ಪತಿ ಸಂಜಯ್ ಸಾಹ್ ಹೇಳಿದರು.
ಮೃತರನ್ನು ರಾಜು ಪಂಡಿತ್ (35), ಬಿಗು ಸಾಹ್ (40), ರಾಹುಲ್ ಕುಮಾರ್ (25) ಹಾಗೂ ಮುಖೇಶ್ ಕುಮಾರ್ (24) ಎಂದು ಗುರುತಿಸಲಾಗಿದೆ. ನಾಲ್ವರು ಕುಮಹಾರ್ ಟೋಲಿಯ ನಿವಾಸಿಗಳಾಗಿದ್ದರು.







