ನನಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವಾತಂತ್ರ್ಯ ನೀಡಿ: ಕಾಂಗ್ರೆಸ್ ಗೆ ನವಜೋತ್ ಸಿಂಗ್ ಸಿಧು ಆಗ್ರಹ

ಚಂಡೀಗಡ: ತನ್ನ ಸಲಹೆಗಾರ ವಿವಾದದಲ್ಲಿ ಸಿಲುಕಿರುವುದರಿಂದ ವಿಚಲಿತರಾಗಿರುವ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ತನಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ವಾತಂತ್ರ್ಯ ನೀಡದಿದ್ದರೆ "ಯಾರನ್ನೂ ಬಿಡುವುದಿಲ್ಲ" ಎಂದು ಶುಕ್ರವಾರ ಘೋಷಿಸಿದರು.
"ನನಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುವಂತೆ ನಾನು ಹೈಕಮಾಂಡ್‌ಗೆ ಕೇಳಿದ್ದೇನೆ ಹಾಗೂ ಮುಂದಿನ ಎರಡು ದಶಕಗಳಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಏಳಿಗೆಯಾಗುವಂತೆ ನೋಡಿಕೊಳ್ಳುತ್ತೇನೆ. ನಾನು ಯಾರನ್ನೂ ಬಿಡುವುದಿಲ್ಲ" ಎಂದು ನವಜೋತ್ ಸಿಧು ಹೇಳಿದರು. ಸಿಧು ಇತ್ತೀಚೆಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೊಂದಿಗಿನ ಭಿನ್ನಾಭಿಪ್ರಾಯದ ಬಳಿಕ ಪಕ್ಷದ ಪಂಜಾಬ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.
ಸಿಧು ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ, ಕಾಂಗ್ರೆಸ್ ನ ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದರು.
"ಮಾಧ್ಯಮದ ಊಹಾಪೋಹಗಳ ಆಧಾರದ ಮೇಲೆ ನಾನು ಅವರನ್ನು ಪ್ರಶ್ನಿಸಲು ಸಾಧ್ಯವಿಲ್ಲ ... ಹೇಳಿಕೆಯ ಸಂದರ್ಭವನ್ನು ನಾನು ನೋಡುತ್ತೇನೆ. ಅವರು ಪಕ್ಷದ ಮುಖ್ಯಸ್ಥರಾಗಿದ್ದಾರೆ. ಅವರನ್ನು ಹೊರತುಪಡಿಸಿ ಯಾರು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು" ಎಂದು ರಾವತ್ ಹೇಳಿದರು.
ಪಾಕಿಸ್ತಾನ ಹಾಗೂ ಕಾಶ್ಮೀರದ ಕುರಿತಾಗಿ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ತಮ್ಮ ಸಲಹೆಗಾರರನ್ನು ಕೂಡಲೆ ಉಚ್ಚಾಟಿಸಬೇಕೆಂದು ರಾವತ್, ಸಿಧುಗೆ ಎಚ್ಚರಿಕೆ ನೀಡಿದ್ದರು. ರಾವತ್ ಹೇಳಿಕೆಗೆ ಉತ್ತರವಾಗಿ ಸಿಧು ಅಮೃತಸರದಲ್ಲಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
"ಈ ಎಲ್ಲ ಸಲಹೆಗಾರರನ್ನು ಪಕ್ಷವು ನೇಮಿಸಿಲ್ಲ. ಇವರನ್ನು ಉಚ್ಚಾಟಿಸುವಂತೆ ಸಿಧುಗೆ ನಾವು ಹೇಳುತ್ತೇವೆ. ಸಿಧು ಉಚ್ಚಾಟಿಸದಿದ್ದರೆ ನಾವು ಅದನ್ನು ಮಾಡುತ್ತೇವೆ. ಪಕ್ಷಕ್ಕೆ ಮುಜುಗರ ತರುವವರನ್ನು ಪಕ್ಷ ಇಷ್ಟಪಡುವುದಿಲ್ಲ'' ಎಂದು ಬುಧವಾರ NDTV ಗೆ ರಾವತ್ ತಿಳಿಸಿದ್ದರು.







