ಜನರ ಸ್ಥಳೀಯ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹಾರಕ್ಕೆ ಆದ್ಯತೆ : ಸಚಿವ ಸುನಿಲ್ ಕುಮಾರ್

ಕಾರ್ಕಳ: ಗ್ರಾಮೀಣ ಭಾಗದ ಜನರ ಸ್ಥಳೀಯ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹಾರಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮರ್ಣೆ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.
ರಾಜ್ಯ ಸರಕಾರದ ಅತ್ಯಂತ ಮಹತ್ವದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿ ನನ್ನ ಹೆಗಲ ಮೇಲಿದ್ದು ಇದನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆಯಿದ್ದು ಈ ನಿಟ್ಟಿನಲ್ಲಿ ಕ್ಷೇತ್ರದ ಜನರು ನನ್ನ ಜತೆ ಸಹಕರಿಸಬೇಕೆಂದು ಮನವಿ ಮಾಡಿದರು.
ರಾಜ್ಯದ ಅತ್ಯಂತ ಪ್ರಮುಖ ಸಮಸ್ಯೆಯಾಗಿರುವ ಡೀಮ್ಡ್ ಅರಣ್ಯ ಸಮಸ್ಯೆಯಿಂದ ಜನರು ನಿವೇಶನ, ಮನೆ,ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಇನ್ನು ಕೆಲವೇ ತಿಂಗಳೊಳಗೆ ಅಧಿಕಾರಿಗಳ ಸಭೆ ಕರೆದು ಡೀಮ್ಡ್ ಅರಣ್ಯದ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಇದಲ್ಲದೇ ಕ್ಷೇತ್ರದಲ್ಲಿ ನಡೆಯಬೇಕಿರುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ಪರಿಹರಿಸಲಾಗುವುದು. ಕಾರ್ಕಳ ಕ್ಷೇತ್ರದ ಯಾವುದೇ ಗ್ರಾಮದಲ್ಲಿಯೂ ವಿದ್ಯುತ್ ಸಮಸ್ಯೆ ಇರಬಾರದು, ಲೋವೋಲ್ಟೇಜ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅಗತ್ಯವಿದ್ದಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸುವ ಕುರಿತು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಚಿವನಾದ ಮೇಲೆ ನಾನು ಜನರಿಗೆ ಸಿಗುವುದಿಲ್ಲ ಎನ್ನುವ ಭಾವನೆ ಬೇಡ ನಮ್ಮ ಕಚೇರಿ ಹಾಗೂ ನಮ್ಮ ಪಕ್ಷದ ಜನಪ್ರತಿನಿಧಿಗಳು, ಕಾರ್ಯಕರ್ತರು ಸದಾ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂದರು. ಬಳಿಕ ಜನರ ಅಹವಾಲುಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗೇರು ನಿಗಮದ ಅಧ್ಯಕ್ಷ ರಾದ ಮಣಿರಾಜ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್, ಜಿ.ಪಂ ಮಾಜಿ ಸದಸ್ಯ ಉದಯ ಕೋಟ್ಯಾನ್, ಮರ್ಣೆ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಪೂಜಾರಿ, ಉಪಾಧ್ಯಕ್ಷ ಕುರುಂಬಿಲ, ತಾ.ಪಂ ಇಓ ಗುರುದತ್ , ನಂದಕುಮಾರ್ ಹೆಗ್ಡೆ, ಗುರುಪ್ರಸಾದ್ ರಾವ್ ,ವಿದ್ಯಾ ಪೈ, ಜಲಜ ಶೆಟ್ಟಿ, ಪಿಡಿಓ ತಿಲಕ್ ರಾಜ್ ಮುಂತಾದವರು ಹಾಜರಿದ್ದರು.
ಪಂಚಾಯಿತಿ ಸದಸ್ಯ ರಾಘವೇಂದ್ರ ಗುರುಪ್ರಸಾದ್ ರಾವ್ ಸ್ವಾಗತಿಸಿದರು, ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ತಾ.ಪಂ ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.







