ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು, ಆ.27: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಮತ್ತು ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಗಳ ತಂಡ ನಡೆಸಿದ ಅತ್ಯಾಚಾರ ಘಟನೆ ಅಮಾನವೀಯ ಮತ್ತು ಪೈಶಾಚಿಕ ಕೃತ್ಯವಾಗಿದೆ. ಈ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಾದ್ಯಂತ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದುದೆ. ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ದೇಶದ ನಾನಾ ಕಡೆಗಳಿಂದ ರಾಜ್ಯಕ್ಕೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ. ಮೈಸೂರಿನ ಘಟನೆಯ ಬಳಿಕ ಎಲ್ಲರಲ್ಲೂ ಆತಂಕ ಮೂಡಿಸಿದೆ. ಪ್ರಧಾನಿ ಮೋದಿ ಹೇಳುವ ‘ಭೇಟಿ ಬಚಾವೂ ಭೇಟಿ ಪಡಾವೋ’ ಉದ್ಘೋಷ ಕೇವಲ ಹೇಳಿಕೆಗೆ ಸೀಮಿತವಾಗಿದೆ. ಪ್ರಧಾನಿಗಳ ಮೇಲಿಟ್ಟ ಆಶಯವೂ ಸುಳ್ಳಾಗಿದೆ ಎಂದು ಶಾಲೆಟ್ ಪಿಂಟೋ ಹೇಳಿದರು.
ಘಟನೆಗೆ ಸಂಬಂಧಿಸಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಗೆ ನಿಜಕ್ಕೂ ಬೇಜವಾಬ್ದಾರಿತನದಿಂದ ಕೂಡಿದೆ. ಗೃಹಮಂತ್ರಿಯಾಗಿ ಮಹಿಳೆಯರಿಗೆ ರಕ್ಷಣೆ, ವಿದ್ಯಾರ್ಥಿನಿಯರಲ್ಲಿ ಸ್ಥೈರ್ಯ ತುಂಬಿಸುವ ಕೆಲಸ ಮಾಡಬೇಕಿತ್ತು. ಆದರೆ ಗೃಹ ಸಚಿವರು ಪ್ರಕರಣಕ್ಕೆ ಬೇರೆಯೇ ತಿರುವು ನೀಡಲು ಹೊರಟಿದ್ದಾರೆ. ಇದನ್ನು ಮಹಿಳಾ ಕಾಂಗ್ರೆಸ್ ಖಂಡಿಸುತ್ತದೆ ಎಂದು ಶಾಲೆಟ್ ಪಿಂಟೋ ನುಡಿದರು.
ಕಾರ್ಪೊರೇಟರ್ ಝೀನತ್ ಶಂಶುದ್ದೀನ್, ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ಡಿ.ರಾವ್, ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲಾ ಗಟ್ಟಿ, ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ ಪದ್ಮನಾಭ್, ಮುಡಿಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೃಂದಾ ಮೇರಮಜಲು, ಕಾಂಗ್ರೆಸ್ ನಾಯಕಿಯರಾದ ಕವಿತಾ ವಾಸು, ಅಪ್ಪಿ, ಗೀತಾ ಅತ್ತಾವರ್, ಗೀತಾ ಪ್ರವೀಣ್ , ಪ್ರವೀತಾ, ಅನಿತಾ, ಕಾವ್ಯಾ, ಮೀನಾ ಟೆಲ್ಲಿಸ್, ಪ್ರಭಾವತಿ, ಸುನೀತಾ ರಾಡ್ರಿಗಸ್, ನಂದಾ ಪಾಸ್ ಉಪಸ್ಥಿತರಿದ್ದರು.








