ಘಟನಾ ಸ್ಥಳಕ್ಕೆ ಭೇಟಿ ನೀಡದ ಗೃಹ ಸಚಿವರ ವಿರುದ್ಧ ಸಾರ್ವಜನಿಕರಿಂದ ಟೀಕೆ: ನಂತರ ಸ್ಥಳ ಪರಿಶೀಲಿಸಿದ ಸಚಿವ

ಮೈಸೂರು,ಆ.27: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧ ಪಟ್ಟಂತೆ ಮೈಸೂರಿಗೆ ಆಗಮಿಸಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡದೆ ಬರೀ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಕಾಲಹರಣ ಮಾಡುತ್ತಿದ್ದಾರೆ ಎಂಬ ಟೀಕೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದ್ದಂತೆ ನೆಪ ಮಾತ್ರಕ್ಕೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕ್ಷಣ ಮಾತ್ರದಲ್ಲಿ ವಾಪಸ್ ತೆರಳಿದ್ದಾರೆ.
ಅತ್ಯಾಚಾರಕ್ಕೆ ಸಂಬಂಧ ಪಟ್ಟ ಮಾಹಿತಿ ಪಡೆಯಲು ಗುರುವಾರ ರಾತ್ರಿಯೇ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಗೃಹ ಸಚಿವರು ಶುಕ್ರವಾರ ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದರು. ನಂತರ ಜಲದರ್ಶಿನಿಯಲ್ಲಿ ಉಪಹಾರ ಸೇವಿಸಿ ಕೆಪಿಎ ಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡರು.
ಮಧ್ಯಾಹ್ನ ಕಳೆದರೂ ಘಟನಾ ಸ್ಥಳಕ್ಕೆ ಭೇಟಿ ನೀಡದ ಸಚಿವರ ನಡೆಗೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಯಿತು ನಂತರ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಮಧ್ಯಾಹ್ನ 2.30 ರ ಸಮಯಕ್ಕೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವರು ದೂರದಲ್ಲಿ ನಿಂತು ವೀಕ್ಷಿಸಿ ಐದು ನಿಮಿಷವೂ ಸ್ಥಳದಲ್ಲಿ ಇರದೇ ತಕ್ಷಣ ವಾಪಸ್ ತೆರಳಿದ್ದಾರೆ.
ಈ ವೇಳೆ ಮಾಧ್ಯಮದವರಿಗೆ ಸಚಿವರ ಭೇಟಿಯ ಚಿತ್ರಣ ಚಿತ್ರೀಕರಿಸಲು ಪೊಲೀಸರು ಅವಕಾಶ ನೀಡದೆ ಅರ್ಧದಲ್ಲಿಯೇ ತಡೆದರು.
ಇದಕ್ಕೂ ಮೊದಲು ಬೆಳಿಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದ್ದು, ಆರೋಪಿಗಳ ಪತ್ತೆಗೆ ಸ್ವಲ್ಪ ಸಮಯಾವಕಾಶ ಬೇಕಿದೆ ಎಂದು ಹೇಳಿದರು.
ಘಟನೆ ಸಂಬಂಧ ಯಾವ ಹಂತದಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ, ಒಟ್ಟಿನಲ್ಲಿ ಆರೋಪಿಗಳು ಪತ್ತೆಯಾಗಲಿದ್ದಾರೆ ಎಂದು ತಿಳಿಸಿದರು. ಸಂತ್ರಸ್ತೆ ಯುವತಿ ಚೇತರಿಸಿಕೊಳ್ಳುತ್ತಿದ್ದು ಆಕೆಯಿಂದ ಇನ್ನೂ ಮಾಹಿತಿ ಪಡೆದಿಲ್ಲ ಎಂದು ಹೇಳಿದರು.







