ಪ್ರಪಂಚದ ಅತ್ಯಂತ ಬಲಿಷ್ಠ ಕೋರ್ಟ್ ನಲ್ಲಿ ಕೆಲಸ ಮಾಡುವ ಅವಕಾಶ ದೊರಕಿದೆ: ಸಿಜೆ ಎ.ಎಸ್.ಓಕ
ಬೆಂಗಳೂರು, ಆ.27: ಪ್ರಪಂಚದ ಬಲಿಷ್ಠ ಕೋರ್ಟ್ ನಲ್ಲಿ ಕೆಲಸ ಮಾಡುವ ಅವಕಾಶ ನನಗೆ ಈಗ ದೊರೆತಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದನೋನ್ನತಿ ಪಡೆದಿರುವ ಕರ್ನಾಟಕ ಹೈಕೋರ್ಟ್ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಹೈಕೋರ್ಟ್ ಸಭಾಂಗಣದಲ್ಲಿ ರಾಜ್ಯ ವಕೀಲರ ಪರಿಷತ್ ಸಹಯೋಗದಲ್ಲಿ ಹೈಕೋರ್ಟ್ ವತಿಯಿಂದ ಸಿಜೆ ಎ.ಎಸ್.ಓಕ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಳೆದ ಹದಿನೆಂಟು ವರ್ಷಗಳಿಂದ ನ್ಯಾಯಮೂರ್ತಿಯಾಗಿರುವ ನಾನು ಪ್ರತಿದಿನವೂ ಒಂದಿಲ್ಲೊಂದು ಹೊಸ ವಿಚಾರ ತಿಳಿದುಕೊಂಡಿದ್ದೇನೆ. ಇದಕ್ಕಾಗಿ ವಕೀಲರ ಪರಿಷತ್‌ಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಈಗ, ಪ್ರಪಂಚದ ಬಲಿಷ್ಠ ಕೋರ್ಟ್ ನಲ್ಲಿ ಮೂರೂವರೆ ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡುವ ಅವಕಾಶ ದೊರೆತಿದೆ ಎಂದು ಎ.ಸ್.ಓಕ ಅವರು ಹೇಳಿದರು.
ಮಹಾರಾಷ್ಟ್ರದ ಥಾಣೆಯ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾಗ ಮುಂದೊಂದು ದಿನ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗುತ್ತೇನೆ ಎಂದು ಊಹೆ ಮಾಡಿರಲಿಲ್ಲ ಎಂದ ಓಕ ಅವರು ಅಂತಿಮವಾಗಿ ಇದಕ್ಕೆಲ್ಲವೂ ನಾನು ಅರ್ಹನೇ ಎಂಬುದನ್ನು ಹೇಳುವುದು ವಕೀಲರ ಪರಿಷತ್‌ಗೆ ಬಿಟ್ಟ ವಿಚಾರ. ಅರ್ಹತೆಗಿಂತ ಹೆಚ್ಚಿನದನ್ನು ನಾನು ಪಡೆದಿದ್ದೇನೆ ಎಂದು ವೈಯಕ್ತಿಕವಾಗಿ ನನಗನ್ನಿಸಿದೆ ಎಂದರು.
ಸಂಬಂಧ ಪಟ್ಟ ಎಲ್ಲರೂ ಶಕ್ತಿಮೀರಿ ಪ್ರಯತ್ನಿಸಿದರೆ ದೇಶದಲ್ಲಿ ಬಲಿಷ್ಠ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದುವ ಶಕ್ತಿ ಕರ್ನಾಟಕಕ್ಕೆ ಇದೆ. 2021ರ ಅಂತ್ಯದ ವೇಳೆಗೆ ಒಂದೇ ಒಂದು ಐದು ವರ್ಷದ ವಿಚಾರಣಾ ಪ್ರಕರಣ ಬಾಕಿ ಉಳಿಯಬಾರದು ಎಂಬುದನ್ನು ಸಾಧಿಸುವ ನಿರ್ಧಾರ ಮಾಡಿದ್ದೆ. ಕೋವಿಡ್‌ನಿಂದ ಈ ಕನಸು ನನಸಾಗಲಿಲ್ಲ. ಇದು, 2022ರ ಅಂತ್ಯದ ವೇಳೆಗಾದರೂ ಸಾಧ್ಯವಾಗಬೇಕು ಎಂದು ಹೊಸ ನಿರ್ದೇಶನಗಳನ್ನು ನೀಡಿದ್ದೇನೆ ಎಂದರು.
ಕರ್ನಾಟಕ ಹೈಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳು ಒಂದೇ ಬಾರಿಗೆ ಸುಪ್ರೀಂ ಕೋರ್ಟ್ಗೆ ಪದೋನ್ನತಿ ಪಡೆದಿರುವುದು ರಾಜ್ಯದ ದೃಷ್ಟಿಯಿಂದ ಐತಿಹಾಸಿಕ ಕ್ಷಣವಾಗಿದೆ ಎಂದ ಸಿಜೆ ಓಕ ಅವರು ಎಲ್ಲ ರೀತಿಯ ಸಹಕಾರ ನೀಡಿದ ವಕೀಲರ ವೃಂದ, ಪರಿಷತ್, ನ್ಯಾಯಾಂಗ ಸಿಬ್ಬಂದಿಯನ್ನು ಸ್ಮರಿಸಿದರು.
ನ್ಯಾಯಮೂರ್ತಿ ಬಿ.ವಿ.ನಾಗರತ್ನ, ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷ ಶ್ರೀನಿವಾಸ್ ಬಾಬು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ, ಸಹಾಯಕ ಸಾಲಿಸಿಟರ್ ಜನರಲ್ ಶಾಂತಿ ಭೂಷಣ್, ಎಚ್. ಉಪಸ್ಥಿತರಿದ್ದರು.
ನ್ಯಾಯಾಧೀಶರು ಯಾರನ್ನೂ ಮೆಚ್ಚಿಸಲು ಹೋಗಬಾರದು
‘ನನ್ನ 18 ವರ್ಷಗಳ ಅನುಭವದಲ್ಲಿ ಹೇಳುವುದಾದರೆ ನ್ಯಾಯಾಧೀಶರ ಕೆಲಸ ಎಂದಿಗೂ ಸುಲಭವಲ್ಲ. ನ್ಯಾಯಾಧೀಶರು ಕಠೋರವಾಗಿರದೆ ಕಟ್ಟುನಿಟ್ಟಾಗಿರಬೇಕು ಎಂದು ನಾನು ನಂಬುತ್ತೇನೆ. ನ್ಯಾಯದಾನಕ್ಕೆ ಹೊರತಾಗಿ ನ್ಯಾಯಾಧೀಶರು ಎಂದಿಗೂ ಯಾರನ್ನೂ ಮೆಚ್ಚಿಸಲು ಹೋಗಬಾರದು ಎಂದು ನಾನು ಅಚಲವಾಗಿ ನಂಬಿದ್ದೇನೆ.’
ಎ.ಎಸ್.ಓಕ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ







