ಶಾಲಾ ಬ್ಯಾಗ್‌ಗಳಲ್ಲಿ ಜಯಲಲಿತಾ, ಪಳನಿಸ್ವಾಮಿ ಫೋಟೊ ಬದಲಾಯಿಸದೆ ಹಣ ಉಳಿತಾಯ ಮಾಡಿದ ಸಿಎಂ ಸ್ಟಾಲಿನ್!

ಹೊಸದಿಲ್ಲಿ: ಪ್ರತಿಪಕ್ಷಗಳ ಜೊತೆಗಿನ ಸೌಹಾರ್ದತೆಯ ಹೆಜ್ಜೆಯೊಂದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ರಾಜ್ಯದಲ್ಲಿ ಉಚಿತವಾಗಿ ವಿತರಿಸಲ್ಪಡುತ್ತಿರುವ ಎಐಎಡಿಎಂಕೆಯ ಮಾಜಿ ಸಿಎಂಗಳಾದ ಜಯಲಲಿತಾ ಹಾಗೂ ಎಡಪ್ಪಾಡಿ ಪಳನಿಸ್ವಾಮಿ ಅವರ ಫೋಟೊಗಳನ್ನು ಹೊಂದಿರುವ 65 ಲಕ್ಷ ಶಾಲಾ ಬ್ಯಾಗ್‌ಗಳಲ್ಲಿನ ಫೋಟೊ ಬದಲಾಯಿಸದೇ ಇರಲು ನಿರ್ಧರಿಸಿದ್ದಾರೆ.
ಶಾಲಾ ಚೀಲದ ಹೆಸರನ್ನು ಬದಲಿಸಲು ಅಗತ್ಯವಿರುವ 13 ಕೋಟಿ ರೂ.ಗಳನ್ನು ಉಳಿಸಲು ಸಿಎಂ ಸ್ಟಾಲಿನ್ ಪ್ರಯತ್ನಿಸುತ್ತಿದ್ದಂತೆ, ರಾಜಕೀಯ ರಂಗದಲ್ಲಿ ಅವರ ನಡೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಆಡಳಿತ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕ ಯೋಜನೆಗಳಿಂದ ವಿರೋಧ ಪಕ್ಷದ ಗುರುತುಗಳನ್ನು ಬದಲಿಸುವುದು ಸಾಮಾನ್ಯ ಅಭ್ಯಾಸವಾಗಿದೆ.
ಆದಾಗ್ಯೂ, ಮೇ ತಿಂಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿಎಂಕೆ ಮುಖ್ಯಸ್ಥ ಸ್ಟಾಲಿನ್, ತಮ್ಮ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅವರಿಗೆ ಮಾಜಿ ಸಿಎಂಗಳ ಫೋಟೋಗಳನ್ನು ಉಳಿಸಿಕೊಳ್ಳಲು ಹಾಗೂ ಉಳಿತಾಯ ಮಾಡಿದ ಹಣವನ್ನು ವಿದ್ಯಾರ್ಥಿಗಳ ಇತರ ಕಲ್ಯಾಣ ಯೋಜನೆಯಲ್ಲಿ ಬಳಸಲು ಸೂಚಿಸಿದರು.





