ಪ್ರಾಥಮಿಕ ಶಾಲೆಗಳೂ ಆರಂಭವಾಗಲಿ
ಮಾನ್ಯರೇ,
ಕೊರೋನ ಬಿಕ್ಕಟ್ಟಿನ ಪರಿಣಾಮದಿಂದ ಸುದೀರ್ಘ ಕಾಲ ಬಂದ್ ಆಗಿದ್ದ ಶಾಲೆಗಳ ಬಾಗಿಲುಗಳು ಮತ್ತೆ ತೆರೆದಿವೆ. ಒಂಭತ್ತನೇ ತರಗತಿಯಿಂದ ಹನ್ನೆರಡನೆಯ ತರಗತಿವರೆಗಿನ ಶಾಲಾ ಕಾಲೇಜು ಆರಂಭಿಸಿದ ಸರಕಾರದ ನಿರ್ಧಾರ ಸ್ವಾಗತಾರ್ಹ. ಶಾಲೆ ಬಂದ್ ಕಾರಣದಿಂದ ಇಕ್ಕಟ್ಟಿಗೆ ಸಿಲುಕಿದ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಹೊಸ ಚೈತನ್ಯ ಮೂಡಿಸಿದ್ದಲ್ಲದೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಸರಕಾರ ಆರನೇ ತರಗತಿಯಿಂದ ಎಂಟನೇ ತರಗತಿವರೆಗಿನ ಶಾಲೆಗಳನ್ನು ಇನ್ನೂ ಆರಂಭಿಸಿಲ್ಲ. ಶಾಲೆ ಬಂದ್ ಹಿನ್ನೆಲೆಯಿಂದ ಈಗಾಗಲೇ ಮಕ್ಕಳ ಕಲಿಕೆಯ ಮೇಲೆ ತೀವ್ರ ಪರಿಣಾಮ ಉಂಟಾಗಿದ್ದು, ಶಾಲೆ ಆರಂಭವಾಗದ ಕಾರಣ ಹಳ್ಳಿಗಾಡಿನ ಬಹುತೇಕ ಮಕ್ಕಳು ಪೋಷಕರ ಜೊತೆಗೆ ಹೊಲ-ಗದ್ದೆ ಸೇರಿದಂತೆ ಇನ್ನಿತರ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಇದರಿಂದ ಬಾಲಕಾರ್ಮಿಕ ಮಕ್ಕಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಶಿಕ್ಷಣದಿಂದ ವಂಚಿತಗೊಳ್ಳುತ್ತಿರುವ ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಪ್ರಾಥಮಿಕ ತರಗತಿಗಳನ್ನು ಕೂಡಲೇ ಆರಂಭಿಸಬೇಕು. ಒಂದೂವರೆ ವರ್ಷದಿಂದ ಶಾಲೆಯ ಅಂಗಳದ ಆಟ ಪಾಠ ಇಲ್ಲದೆ ಮನೆಯಲ್ಲಿ ಬಂದಿಯಾದ ಮಕ್ಕಳು, ಶಾಲೆಯಿಲ್ಲದೆ ನಿರುತ್ಸಾಹಗೊಂಡ ಶಿಕ್ಷಕರಿಗೆ ನೆಮ್ಮದಿ ಸಿಗುವಂತೆ ಮಾಡಲು ಸರಕಾರ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಶೀಘ್ರವೇ ಆರಂಭಿಸಲು ಮುಂದಾಗಬೇಕಾಗಿದೆ.





