ಕೋರ್ಸ್‌ಗಳು ಭಾವನೆಗಳನ್ನು ನೋಯಿಸುವ ವಿಷಯಗಳನ್ನು ಹೊಂದಿರಬಾರದು: ದಿಲ್ಲಿ ವಿವಿ
ಪಠ್ಯಕ್ರಮ ವಿವಾದ

ಹೊಸದಿಲ್ಲಿ,ಆ.27: ಪದವಿ ತರಗತಿ ಕೋರ್ಸ್‌ನ ಪಠ್ಯಕ್ರಮದಿಂದ ತಮಿಳು ದಲಿತ ಲೇಖಕರಾದ ಬಾಮಾ ಫೌಸ್ತಿನಾ ಸೂಸೈರಾಜ್ ಮತ್ತು ಸುಖಿರ್ತಾರಿಣಿ ಹಾಗೂ ಬಂಗಾಳಿ ಸಾಹಿತಿ ಮಹಾಶ್ವೇತಾ ದೇವಿ ಅವರ ಬರಹಗಳನ್ನು ಕೈಬಿಡುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ದಿಲ್ಲಿ ವಿವಿಯು,ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಪಠ್ಯಕ್ರಮಕ್ಕೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದೆ.
ಭಾಷಾ ವಿಷಯದ ಪಠ್ಯಕ್ರಮವು ಯಾವುದೇ ವ್ಯಕ್ತಿಯ ಭಾವನೆಗಳನ್ನು ನೋಯಿಸುವ ವಿಷಯಗಳನ್ನು ಒಳಗೊಂಡಿರಬಾರದು ಮತ್ತು ಅದು ಸಮಾಜದ ಭೂತ ಮತ್ತು ವರ್ತಮಾನದ ನಿಜವಾದ ಚಿತ್ರಣವನ್ನು ನೀಡಬೇಕು ಎನ್ನುವ ಪರಿಕಲ್ಪನೆಗೆ ವಿವಿಯು ಬದ್ಧವಾಗಿದೆ ಎಂದೂ ಅದು ತಿಳಿಸಿದೆ.
ಬಿಎ(ಆನರ್ಸ್) ಕೋರ್ಸ್‌ನ ಮೂರು ಪಠ್ಯಪುಸ್ತಕಗಳಿಂದ ಮಹಾಶ್ವೇತಾ ದೇವಿಯವರ ಸಣ್ಣಕಥೆ ‘ದ್ರೌಪದಿ’,ಸುಖಿರ್ತಾರಿಣಿಯವರ ‘ಮೈ ಬಾಡಿ’ ಮತ್ತು ಸೂಸೈರಾಜ್ ಅವರ ‘ಸಂಗಾತಿ ’ಅಧ್ಯಾಯಗಳನ್ನು ತೆಗೆದುಹಾಕಿದ್ದಕ್ಕಾಗಿ ದಿಲ್ಲಿ ವಿವಿಯು ಟೀಕೆಗಳನ್ನು ಎದುರಿಸುತ್ತಿದೆ.
ಬುಧವಾರ ಈ ಕ್ರಮವನ್ನು ವಿರೋಧಿಸಿದ್ದ ವಿವಿಯ ಶೈಕ್ಷಣಿಕ ಮಂಡಳಿಯ 15 ಸದಸ್ಯರು ಐದನೇ ಸೆಮೆಸ್ಟರ್‌ಗಾಗಿ ಇಂಗ್ಲಿಷ್ ಪಠ್ಯಕ್ರಮದ ಕಲಿಕಾ ಫಲಿತಾಂಶ ಆಧಾರಿತ ಪಠ್ಯಕ್ರಮ ಚೌಕಟ್ಟು (ಎಲ್‌ಒಸಿಎಫ್) ಗರಿಷ್ಠ ವಿನಾಶಕತೆಗೆ ಒಳಗಾಗಿದೆ ಎಂದು ಆರೋಪಿಸಿದ್ದರು.
ಮೇಲ್ವಿಚಾರಣಾ ಸಮಿತಿಯು ಯಾವಾಗಲೂ ದಲಿತರು,ಗಿರಿಜನರು,ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ವಿರುದ್ಧ ಪೂರ್ವಾಗ್ರಹವನ್ನು ತೋರಿಸುತ್ತಲೇ ಬಂದಿದೆ ಮತ್ತು ಇಂತಹ ಎಲ್ಲ ಧ್ವನಿಗಳನ್ನು ಪಠ್ಯಕ್ರಮದಿಂದ ತೆಗೆಯುವ ಅದರ ಸಂಘಟಿತ ಪ್ರಯತ್ನಗಳಿಂದ ಇದು ಸ್ಪಷ್ಟವಾಗಿದೆ. ವಿಷಯಕ್ಕೆ ಕೊಂಚ ಸೂಕ್ಷ್ಮತೆಯನ್ನು ತರಬಲ್ಲ ದಲಿತ ಅಥವಾ ಬುಡಕಟ್ಟು ಸಮುದಾಯದ ಯಾವುದೇ ಸದಸ್ಯರು ಮೇಲ್ವಿಚಾರಣಾ ಸಮಿತಿಯಲ್ಲಿ ಇಲ್ಲ ಎನ್ನುವುದನ್ನು ಗಮನಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದರು.
ಆದರೆ ಟೀಕೆಗಳ ಹೊರತಾಗಿಯೂ ವಿವಿಯು ತನ್ನ ಪಠ್ಯಕ್ರಮವು ಎಲ್ಲವನ್ನೂ ಒಳಗೊಂಡಿದೆ ಎಂದು ಪ್ರತಿಪಾದಿಸಿದೆ. ತನ್ನ ಪಠ್ಯಕ್ರಮವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಸಿದ್ಧಿಯ ವಿದ್ವಾಂಸರ ಬರಹಗಳನ್ನು ಅವರ ಬಣ್ಣ,ಜಾತಿ ಅಥವಾ ಜನಾಂಗವನ್ನು ಪರಿಗಣಿಸದೆ ಒಳಗೊಂಡಿದೆ ಎಂದು ಅದು ಹೇಳಿಕೊಂಡಿದೆ.
ಭಾರತೀಯ ಸೇನೆಯನ್ನು ಕೆಟ್ಟದಾಗಿ ಬಿಂಬಿಸಿವೆ ಮತ್ತು ಅಸಹ್ಯ ಲೈಂಗಿಕ ವಿಷಯಗಳನ್ನು ಹೊಂದಿವೆ ಎಂಬ ಆರೋಪದಲ್ಲಿ ಮೂವರು ಲೇಖಕರ ಕೃತಿಗಳನ್ನು ಪಠ್ಯಕ್ರಮದಿಂದ ತೆಗೆಯಲಾಗಿದೆ ಎಂದು ಗುರುತು ಹೇಳಿಕೊಳ್ಳಲು ಬಯಸದ ವಿವಿಯ ಅಧಿಕಾರಿಗಳು ಬುಧವಾರ ಸುದ್ದಿಸಂಸ್ಥೆಗೆ ತಿಳಿಸಿದ್ದರು.
ಬಿಜೆಪಿ ಮತ್ತು ಆರೆಸ್ಸೆಸ್ ಆದೇಶಗಳ ಮೇರೆಗೆ ಕೋರ್ಸ್‌ಗಳ ಮೇಲೆ ಸೆನ್ಸಾರ್‌ಶಿಪ್ ಹೇರಲು ಹಿರಿಯ ಶಿಕ್ಷಣ ತಜ್ಞ್ಞರು ಸಾಧನಗಳಾಗಿರುವುದು ನಾಚಿಕೆಗೇಡಿನದಾಗಿದೆ ಎಂದು ದಿಲ್ಲಿ ವಿವಿ ಶಿಕ್ಷಕರ ಸಂಘದ ಖಜಾಂಚಿ ಆಭಾ ದೇವ್ ಹಬೀಬ್ ಹೇಳಿದ್ದಾರೆ.







