ಪಾಂಡವಪುರ: ಬೈಕ್‍ನಿಂದ ಬಿದ್ದು ಮಹಿಳೆ ಸಾವು

ಪಾಂಡವಪುರ, ಆ27: ಚಲಿಸುತ್ತಿದ್ದ ಬೈಕ್‍ನಿಂದ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಂಬಾರಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ತಾಲೂಕಿನಲ ತಿರುಮಲಾಪುರ ಗ್ರಾಮದ ಶಿವಣ್ಣ ಎಂಬವರ ಪತ್ನಿ ಲಕ್ಷ್ಮೀದೇವಿ (38) ಸಾವನ್ನಪ್ಪಿರುವ ಗೃಹಿಣಿ. ಲಕ್ಷ್ಮೀದೇವಿ ತನ್ನ ತಾಯಿ ಮನೆ ಚಿನಕುರಳಿ ಸಮೀಪದ ಕುಂಬಾರಕೊಪ್ಪಲು ಗ್ರಾಮದಿಂದ ಮಕ್ಕೆ ಹಬ್ಬ ಮುಗಿಸಿಕೊಂಡು ತಮ್ಮ ಸಂಬಂಧಿ ತಿಮ್ಮೇಗೌಡರ ಬೈಕ್ ಹಿಂಬದಿ ಕುಳಿತು ತಿರುಮಲಾಪುರ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು.
ಈ ವೇಳೆ ಕುಂಬಾರಕೊಪ್ಪಲು–ಚಿನಕುರಳಿ ಮಧ್ಯೆ ಇರುವ ತಾಯಿ ಹಳ್ಳದ ಬಳಿ ಆಯಾ ತಪ್ಪಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡರು ಎನ್ನಲಾಗಿದೆ.
ಕೂಡಲೇ ಸ್ಥಳದಲ್ಲಿದ್ದ ಕೆಲವರು ಗಾಯಗೊಂಡ ಲಕ್ಷ್ಮೀದೇವಿ ಅವರನ್ನು ವಾಹನದ ಮೂಲಕ ಚಿನಕುರಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಕೆಳಕ್ಕೆ ಬಿದ್ದ ರಭಸದಲ್ಲಿ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವ ಆದ ಕಾರಣ ಲಕ್ಷ್ಮೀದೇವಿ ಮೃತಪಟ್ಟರು.
ಮೃತ ಲಕ್ಷ್ಮೀದೇವಿಗೆ ಪತಿ ಹಾಗೂ 10 ವರ್ಷದ ಮಗಳಿದ್ದಾಳೆ. ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪಾಂಡವಪುರ ಪೊಲೀಸರು ಮುಂದಿನ ಕ್ರಮ ವಹಿಸಿದ್ದಾರೆ.





