ಪ್ಯಾರಾಲಿಂಪಿಕ್ಸ್; ಟಿಟಿ ಫೈನಲ್ಗೆ ಭವಿನಾಬೆನ್ ಪಟೇಲ್: ಚಿನ್ನಕ್ಕಾಗಿ ಸೆಣಸು

Photo: Twitter
ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್ನ ಮಹಿಳಾ ಸಿಂಗಲ್ಸ್ ಕ್ಲಾಸ್ 4 ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಭವಿನಾಬೆನ್ ಪಟೇಲ್ ಫೈನಲ್ ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ವಿಶ್ವದ ಮೂರನೇ ಕ್ರಮಾಂಕದ ಆಟಗಾರ್ತಿ ಚೀನಾದ ಮಿಯಾವೊ ಝಾಂಗ್ ಅವರನ್ನು ಶನಿವಾರ ಸೋಲಿಸುವ ಮೂಲಕ ರವಿವಾರ ಚಿನ್ನದ ಪದಕಕ್ಕಾಗಿ ನಡೆಯುವ ಸೆಣಸಿಗೆ ಪಟೇಲ್ ಸಜ್ಜಾಗಿದ್ದಾರೆ.
ಭವಿನಾಬೆನ್ ಮೊದಲ ಗೇಮ್ನಲ್ಲಿ 7-11ರಿಂದ ಸೋಲು ಅನುಭವಿಸಿದರು. ಆದರೆ ಬಳಿಕ ತೀವ್ರ ಪ್ರತಿಹೋರಾಟ ಪ್ರದರ್ಶಿಸಿ ಸತತ ಎರಡು ಗೇಮ್ಗಳನ್ನು 11-7, 11-4ರಿಂದ ಗೆದ್ದುಕೊಂಡರು. ನಾಲ್ಕನೇ ಗೇಮ್ 11-9ರಿಂದ ಝಾಂಗ್ ಪಾಲಾಯಿತು. ಆರನೇ ಗೇಮ್ನಲ್ಲಿ ಸತತ ಆರು ಪಾಯಿಂಟ್ಗಳನ್ನು ಗಳಿಸುವುದರೊಂದಿಗೆ ಭರ್ಜರಿಯಾಗಿ ಆರಂಭಿಸಿದ ಪಟೇಲ್ ಬಳಿಕ ಮೂರು ಅಂಕಗಳನ್ನು ಕಳೆದುಕೊಳ್ಳಬೇಕಾಯಿತು. ಆದರೆ ಅಂತಿಮವಾಗಿ 11-8ರಿಂದ ಗೆಲುವಿನ ನಗೆ ಬೀರಿದರು.
ವಿಶ್ವದ ಎರಡನೇ ಕ್ರಮಾಂಕದ ಆಟಗಾರ್ತಿ ಮತ್ತು ಹಾಲಿ ಚಾಂಪಿಯನ್ ಸೆರ್ಬಿಯಾದ ಬೊರಿಸ್ವಾಲಾ ಪೆರಿಕ್ ರಂಕೊವಿಕ್ ವಿರುದ್ಧ ನೇರ ಸೆಟ್ಗಳ ಜಯ ಸಾಧಿಸಿ ಪಟೇಲ್ ಸೆಮಿಫೈನಲ್ ತಲುಪಿದ್ದರು. 34 ವರ್ಷದ ಭುವಿನಾಬೆನ್ಗೆ 12 ವರ್ಷದವರಿದ್ದಾಗ ಪೋಲಿಯೊ ಕಾಣಿಸಿಕೊಂಡಿತ್ತು. ಇವರು ಕ್ವಾರ್ಟರ್ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಸವಾಲನ್ನು ಕೇವಲ 18 ನಿಮಿಷಗಳಲ್ಲಿ 11-5, 11-6, 11-7ರಿಂದ ಬದಿಗೊತ್ತಿದ್ದರು.