ಮೂರನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಇನಿಂಗ್ಸ್ ಸೋಲು
ಕೊಹ್ಲಿ ಪಡೆ 2ನೇ ಇನಿಂಗ್ಸ್ ನಲ್ಲಿ 278 ರನ್ ಗೆ ಆಲೌಟ್, ರಾಬಿನ್ಸನ್ ಗೆ 5 ವಿಕೆಟ್

Photo: twitter/ICC
ಲೀಡ್ಸ್: ಇಂಗ್ಲೆಂಡ್ ವೇಗದ ಬೌಲರ್ ಒಲ್ಲಿ ರಾಬಿನ್ಸನ್(5-65) ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತವು ಮೂರನೇ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ 278 ರನ್ ಗೆ ಆಲೌಟಾಗಿದೆ. ಈ ಮೂಲಕ ಇಂಗ್ಲೆಂಡ್ ಇನ್ನೂ ಒಂದು ದಿನದ ಆಟ ಬಾಕಿ ಇರುವಾಗಲೇ ಇನಿಂಗ್ಸ್ ಹಾಗೂ 76 ರನ್ ಗಳ ಅಂತರದಿಂದ ಪಂದ್ಯವನ್ನು ಜಯಿಸಿದೆ. 5 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.
4ನೇ ದಿನದಾಟವಾದ ಶನಿವಾರ ಭಾರತವು 2 ವಿಕೆಟ್ ನಷ್ಟಕ್ಕೆ 215 ರನ್ ನಿಂದ 2ನೇ ಇನಿಂಗ್ಸ್ ಮುಂದುವರಿಸಿತು. ಔಟಾಗದೆ 91 ರನ್ ಗಳಿಸಿದ್ದ ಚೇತೇಶ್ವರ ಪೂಜಾರ ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೆ ರಾಬಿನ್ಸನ್ ಬೀಸಿದ ಎಲ್ ಬಿಡಬ್ಲ್ಯು ಬಲೆಗೆ ಬಿದ್ದರು.
45 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ 55 ರನ್ ಗಳಿಸಿ ರಾಬಿನ್ಸನ್ ಗೆ ವಿಕೆಟ್ ಒಪ್ಪಿಸಿದರು.
ಅಜಿಂಕ್ಯ ರಹಾನೆ(10), ರಿಷಭ್ ಪಂತ್(1), ಶಮಿ(6), ಇಶಾಂತ್ ಶರ್ಮಾ(2)ಬೇಗನೆ ವಿಕೆಟ್ ಕೈಚೆಲ್ಲಿದರು. ಆಲ್ ರೌಂಡರ್ ರವೀಂದ್ರ ಜಡೇಜ (30)ಕೆಳಕ್ರಮಾಂಕದಲ್ಲಿ ಒಂದಷ್ಟು ಹೋರಾಟ ನೀಡಿದರು.
ರಾಬಿನ್ಸನ್ ಐದು ವಿಕೆಟ್ ಗೊಂಚಲು ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.