ಒಟಿಟಿ ಪ್ಲಾಟ್‌ಫಾರಂನಲ್ಲಿ ಶೀಘ್ರ ಯಕ್ಷಗಾನ ಪ್ರದರ್ಶನ: ಒಂಬತ್ತು ಪಾತ್ರಗಳನ್ನು ಒಬ್ಬರೇ ನಿರ್ವಹಿಸುವ ದಾಖಲೆ
ಮಂಗಳೂರು, ಆ.28: ಸಾಮಾನ್ಯವಾಗಿ ಯಕ್ಷಗಾನದಲ್ಲಿ ಏಕವ್ಯಕ್ತಿ ಪ್ರದರ್ಶನ ಇರುತ್ತದೆ. ಅದು ಏಕಪಾತ್ರಾಭಿನಯ ಶೈಲಿಯಲ್ಲಿರುತ್ತಿತ್ತು. ಆದರೆ ಈಗ ಕಲಾವಿದರು ಒಬ್ಬರೇ ಒಂದು ಪ್ರಸಂಗವನ್ನು ಪ್ರದರ್ಶಿಸಲು ಹೊರಟಿದ್ದಾರೆ.
ಇದು ಏಕವ್ಯಕ್ತಿ ಯಕ್ಷಗಾನ. ಇದರಲ್ಲಿ ಇರುವ ಎಲ್ಲ 9 ಪಾತ್ರಗಳನ್ನೂ ನಿರ್ವಹಿಸಿದವರು ಒಬ್ಬರೆ. ಅದೆಲ್ಲವನ್ನೂ ದೃಶ್ಯಶ್ರಾವ್ಯರೂಪದಲ್ಲಿ ದಾಖಲಿಸಿ ಮುಂದೆ ಒಟಿಟಿ ಪ್ಲಾಟ್‌ಫಾರಂ ಮೂಲಕ ಪ್ರದರ್ಶಿಸುವ ಯೋಜನೆಯನ್ನೂ ಮಂಗಳೂರಿನ ಯುವ ಯಕ್ಷಗಾನ ಕಲಾವಿದ ದೀಪಕ್ ರಾವ್ ಪೇಜಾವರ ಹಾಕಿಕೊಂಡಿದ್ದಾರೆ.
ಈ ಬಗ್ಗೆ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಯಕ್ಷಗಾನ ಕಲಾವಿದ ದೀಪಕ್ ರಾವ್, ಎರಡೂವರೆ ಗಂಟೆಯ ಸುಧನ್ವಾರ್ಜುನ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುವುದಕ್ಕೆ ಸಿದ್ಧತೆ ನಡೆಯುತ್ತಿದೆ. ನೇರವಾಗಿ ಓರ್ವ ಕಲಾವಿದ ಎಲ್ಲ ಪಾತ್ರಗಳನ್ನೂ ಸ್ಟೇಜ್ ಮೇಲೆ ಪ್ರದರ್ಶಿಸುವುದಕ್ಕಾಗದು. ಅದಕ್ಕಾಗಿ ಸಿನೆಮಾ ತಂತ್ರದ ಮೊರೆ ಹೋದ ಅವರು, ತಮ್ಮ ಮಿತ್ರ, ಬರಹಗಾರ ಕಿರಣ್ ಉಪಾಧ್ಯಾಯ ಅವರೊಂದಿಗೆ ಚರ್ಚಿಸಿದರು. ಬಳಿಕ ಇದಕ್ಕಾಗಿ ಪ್ರತ್ಯೇಕ ಶೂಟಿಂಗ್, ಎಡಿಟಿಂಗ್ ಮಾಡುವುದಕ್ಕೆ ನಿರ್ಧರಿಸಿ ತಂತ್ರಜ್ಞರನ್ನು ಸಂಪರ್ಕಿಸಿದರು. ಗೌರಿ ವೆಂಕಟೇಶ್ ಎಂಬ ಛಾಯಾಗ್ರಾಹಕರು, ದಿಲೀಪ್ ಕುಮಾರ್ ಎಂಬ ಸಂಕಲನಕಾರರು ಕೈಜೋಡಿಸಲಾಯಿತು ಎಂದರು.
ಈಗಾಗಲೇ ಬೆಂಗಳೂರಿನ ಸ್ಟುಡಿಯೋದಲ್ಲಿ ಶೂಟಿಂಗ್ ಪೂರ್ಣಗೊಂಡಿದೆ. ಸದ್ಯ ಸಂಕಲನ ನಡೆಯುತ್ತಿದ್ದು, ಮುಗಿಯಲು ಇನ್ನೂ ಸುಮಾರು 20 ದಿನ ಬೇಕಾಗಬಹುದು. ಸುಧನ್ವಾರ್ಜುನ ಪ್ರಸಂಗದಲ್ಲಿ ಬರುವ ಪಾತ್ರಗಳು 9. ಅವುಗಳೆಂದರೆ- ಸುಧನ್ವ, ಅರ್ಜುನ, ದೂತ, ಕುವಲೆ, ಪ್ರಭಾವತಿ, ಸುದರ್ಭೆ, ಕೃಷ್ಣ, ಅನುಸಾಲ್ವ, ಹಂಸಧ್ವಜ ಎಂದು ಅವರು ಮಾಹಿತಿ ನೀಡಿದರು.
ಹಿಮ್ಮೇಳದಲ್ಲಿ ಭಾಗವತರು ರವಿಚಂದ್ರ ಕನ್ನಡಿಕಟ್ಟೆ, ಚೆಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ, ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ ಸಹಕರಿಸಿದ್ದಾರೆ. ಆದರೆ ಇದನ್ನು ಡಿಜಿಟಲ್ ಮಾಧ್ಯಮದಲ್ಲಿ ಸಂಕಲನ ಮಾಡುವುದಕ್ಕೆ ತಾಂತ್ರಿಕವಾಗಿ ಕ್ಲಿಷ್ಟಕರವಾಗಿರುವುದರಿಂದ ಹಿನ್ನೆಲೆಯಲ್ಲಿ ಹಿಮ್ಮೇಳದವರನ್ನು ತೋರಿಸಲು ಅನಿವಾರ್ಯವಾಗಿ ಸಾಧ್ಯವಾಗುತ್ತಿಲ್ಲ ಎಂದರು.
ಯಕ್ಷಗಾನ ಬದಲಾಗುತ್ತಿದೆ. ಹಾಗಿರುವಾಗ ಸಾಂಪ್ರದಾಯಿಕ ಸೊಗಡನ್ನು ಉಳಿಸಿಕೊಳ್ಳುವ ಉದ್ದೇಶದಲ್ಲಿ ಈ ಯತ್ನ ಮಾಡಲಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಒಬ್ಬ ಕಲಾವಿದ ಒಂಭತ್ತು ಪಾತ್ರ ನಿರ್ವಹಣೆ ಮಾಡುತ್ತಿರುವುದು ಇದೇ ಮೊದಲು. ನಾನು ಹಿಂದೆ ಎಲ್ಲ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ್ದೇನೆ. ಇಲ್ಲಿ ಸ್ತ್ರೀವೇಷ, ರಾಜವೇಷ, ಪುಂಡುವೇಷ ಹೀಗೆ ಎಲ್ಲವನ್ನೂ ನಿರ್ವಹಿಸುತ್ತಿರುವುದೂ ಒಂದು ವಿಶೇಷ ಎಂದು ಹೇಳಿದರು.
ಹಿಂದೆ ಮಂಗಳೂರಿನಲ್ಲಿ ಪ್ರಾಧ್ಯಾಪಕರಾಗಿದ್ದ ದೀಪಕ್ ಹವ್ಯಾಸಿ ಕಲಾವಿದರೂ ಆಗಿದ್ದವರು. ಕಳೆದ ಕೆಲವರ್ಷಗಳಿಂದ ಬಹರೈನ್ ದೇಶದ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅಲ್ಲೂ ಯಕ್ಷಗಾನದ ತರಬೇತಿ ನೀಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶ್ವೇತಾ ಪೇಜಾವರ ಹಾಗೂ ಡಾ.ಕಿರಣ್ ಉಪಾಧ್ಯಾಯ ಉಪಸ್ಥಿತರಿದ್ದರು.







