ಉಪ್ಪಿನಂಗಡಿ : ಬಾಲಕನ ಅಪಹರಣಕ್ಕೆ ಯತ್ನ ಆರೋಪ; ದೂರು

ಉಪ್ಪಿನಂಗಡಿ : ಆನ್ ಲೈನ್ ಪರೀಕ್ಷಾ ಪೇಪರ್ ಗಳನ್ನು ಮದರಸಕ್ಕೆ ನೀಡಿ ಹಿಂತಿರುಗುತ್ತಿದ್ದ ಹನ್ನೆರಡರ ಹರೆಯದ ಬಾಲಕನನ್ನು ಅಪಹರಿಸಲು ಕಾರಿನಲ್ಲಿ ಬಂದ ಅಪರಿಚಿತರು ಯತ್ನಿಸಿದ್ದಾರೆ ಎನ್ನಲಾದ ಘಟನೆ ಉಪ್ಪಿನಂಗಡಿಯ ಲಕ್ಷ್ಮೀ ನಗರ ಎಂಬಲ್ಲಿ ನಡೆದಿದೆ.
ಲಕ್ಷ್ಮೀ ನಗರ ನಿವಾಸಿ ಅಬ್ದುಲ್ಲಾ ಎಂಬವರ ಪುತ್ರ ಹನ್ನೆರಡರ ಹರೆಯದ ಬಾಲಕ ಮದರಸದಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ರಸ್ತೆ ಬದಿ ನಿಲ್ಲಿಸಲಾಗಿದ್ದ ಮಾರುತಿ ಓಮ್ನಿ ಕಾರಿನ ಬಾಗಿಲು ತೆಗೆದು ವ್ಯಕ್ತಿಯೋರ್ವ ಬಾಲಕನ ಕೈ ಹಿಡಿದು ಎಳೆದನೆಂದೂ, ತಾನು ಆತನ ಕೈಯನ್ನು ಕಚ್ಚಿ ಆತನ ಹಿಡಿತದಿಂದ ತಪ್ಪಿಸಿಕೊಂಡು ಮನೆಗೆ ಬಂದಿರುವುದಾಗಿ ಬಾಲಕ ಮನೆ ಮಂದಿಗೆ ತಿಳಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಠಾಣೆ ಪೊಲೀಸರು ಹಾಗು ಸ್ಥಳೀಯರು ತಕ್ಷಣವೇ ಪತ್ತೆ ಕಾರ್ಯಾಚರಣೆ ನಡೆಸಿದರಾದರೂ ಅಪಹರಣಕ್ಕೆ ಯತ್ನಿಸಲಾದ ಕಾರು ಪತ್ತೆಯಾಗಲಿಲ್ಲ. ಸಮೀಪದ ಸಿಸಿ ಗಳನ್ನು ಪರಿಶೀಲಿಸಿದಾಗ ಬಾಲಕ ಹೇಳಿದ ಸ್ಥಳದಲ್ಲಿ ಮತ್ತು ಸಮಯದಲ್ಲಿ ಮಾರುತಿ ಓಮ್ನಿ ಕಾರೊಂದು ರಸ್ತೆ ಬದಿ ನಿಂತಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಮಕ್ಕಳ ಅಪಹರಣದ ತಂಡ ಪರಿಸರದಲ್ಲಿ ಕಾರ್ಯೋನ್ಮುಖಗೊಂಡಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಕಾರಣ ಪರಿಸರದಲ್ಲಿ ಭೀತಿಯ ವಾತಾವರಣ ಮೂಡಿದೆ.







