ಅಮೆರಿಕ-ಚೀನಾ ಸೇನಾ ಮಾತುಕತೆ: ಅಫ್ಘಾನ್ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ
ಕಾಬೂಲ್,ಆ.17: ಜೋಬೈಡನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಅಮೆರಿಕವು ಚೀನಾದ ಜೊತೆ ಶುಕ್ರವಾರ ಮೊದಲ ಸುತ್ತಿನ ಮಿಲಿಟರಿ ಮಾತುಕತೆಯನ್ನು ನಡೆಸಿದೆ. ಈ ಮಹತ್ವದ ಮಾತುಕತೆಯಲ್ಲಿ ಅಫ್ಘಾನಿಸ್ತಾನದ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತೆಂದು ತಿಳಿದುಬಂದಿದೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಅಂತಾರಾಷ್ಟ್ರೀಯ ಮಿಲಿಟರಿ ಸಹಕಾರ ಕಾರ್ಯಾಲಯದ ಮೇಜರ್ ಜನರಲ್ ಹುವಾಂಗ್ ಕ್ಸುಯೆಪಿಂಗ್ ಅವರು ಕಳೆದ ವಾರ ತನ್ನ ಅಮೆರಿಕ ಸಹವರ್ತಿ ಮೈಕೆಲ್ ಚೇಸ್ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿರುವುದಾಗಿ ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ಅಫ್ಘಾನಿಸ್ತಾನ ಬಿಕ್ಕಟ್ಟು ಅತ್ಯಂತ ತುರ್ತಾಗಿ ಚರ್ಚಿಸಬೇಕಾದ ಅಪಾಯ ನಿರ್ವಹಣಾ ವಿಷಯವಾಗಿದೆಯೆಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಈ ವರ್ಷದ ಆರಂಭದಲ್ಲಿ ಆಲಾಸ್ಕದಲ್ಲಿ ನಡೆದ ಮಾತುಕತೆಯ ವೇಳೆ ಎಚ್ಚರಿಕೆ ನೀಡಿದ್ದರು. ಆದರೆ ಅಮೆರಿಕದ ವಿದೇಶಾಂಗ ಸಚಿವರು ಅದನ್ನು ನಿರ್ಲಕ್ಷಿಸಿದ್ದರು ಎಂದು ಚಿ ಹಾಂಕಾಂಗ್ ಮೂಲದ ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ನಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ ಚೀನಾ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೀನಾ ಮಿಲಿಟರಿಯು ಬೀಜಿಂಗ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ರಕ್ಷಣಾ ವಿಭಾಗದ ಮೂಲಕ ಅಮೆರಿಕದ ಜೊತೆ ಸೇನಾ ಮಟ್ಟದ ಸಂವಹನವನ್ನು ಇರಿಸಿಕೊಂಡಿದೆ. ಆದರೆ ಕಳೆದ ವಾರ ಇದೇ ಮೊದಲ ಬಾರಿಗೆ ಉಭಯದೇಶಗಳ ಹಿರಿಯ ಅಧಿಕಾರಿಗಳು ಮಾತುಕತೆಗಳನ್ನು ಪುನಾರಂಭಿಸಿದ್ದಾರೆಂದು ಚೀನಾದ ಅಧಿಕಾರಿ ತಿಳಿಸಿದ್ದಾರೆ.







