ಅಫ್ಘಾನ್ ನಲ್ಲಿ ತೀವ್ರ ಬರ: 70 ಲಕ್ಷಕ್ಕೂ ಅಧಿಕ ಮಂದಿ ಬಾಧಿತ; ನೆರವಿಗಾಗಿ ವಿಶ್ವಸಮುದಾಯಕ್ಕೆ ಎಫ್ಎಓ ಮನವಿ

ಕಾಬೂಲ್,ಆ.28: ಯುದ್ಧದಿಂದ ಜರ್ಜರಿತವಾಗಿರುವ ಅಫ್ಘಾನಿಸ್ತಾನದಲ್ಲಿ ತೀವ್ರವಾದ ಬರದಿಂದ ತತ್ತರಿಸಿರುವ 70 ಲಕ್ಷಕ್ಕೂ ಅಧಿಕ ರೈತರಿಗೆ ನೆರವು ನೀಡುವಂತೆ ಕೋರಿ ವಿಶ್ವಸಂಸ್ಥೆಯ ಶನಿವಾರ ತುರ್ತು ಮನವಿ ಮಾಡಿದೆ.
ಕೋವಿಡ್19 ಸಾಂಕ್ರಾಮಿಕದ ಹಾವಳಿಯಿಂದ ಅಫ್ಘಾನಿಸ್ತಾನದಲ್ಲಿ ಕೃಷಿ ಕಾರ್ಮಿಕರ ಅಭಾವ ಇನ್ನೂ ಹೆಚ್ಚಾಗಿದೆ ಎಂದು ಅದು ಹೇಳಿದೆ.
ಅಫ್ಘಾನಿಸ್ತಾನದ ವಿಶಾಲವಾದ ಗ್ರಾಮೀಣ ಪ್ರದೇಶಗಲಲ್ಲಿ ಬರದ ದುಷ್ಪರಿಣಾಮವನ್ನ ಎದುರಿಸಲು ಮುಂದಿನ ತಿಂಗಳುಗಳು ಹಾಗೂ ವಾರಗಳಲ್ಲಿ ಆ ದೇಶದ ಕೃಷಿ ಕ್ಷೇತ್ರಕ್ಕೆ ತುರ್ತು ಬೆಂಬಲ ನೀಡುವುದು ಮುಖ್ಯವಾಗಿದೆ ಎಂದು ವಿಶ್ವ ಆಹಾರ ಹಾಗೂ ಕೃಷಿ ಸಂಸ್ಥೆಯ (ಎಫ್ಎಓ)ನಿರ್ದೇಶಕ ಕ್ಯು ಡೊಂಗ್ಯು ತಿಳಿಸಿದ್ದಾರೆ.
ಒಂದು ವೇಳೆ ತೀವ್ರವಾದ ಬರದಿಂದ ತತ್ತರಿಸುತ್ತಿರುವ ಜನರನ್ನು ರಕ್ಷಿಸಲು ನಾವು ವಿಫಲರಾದಲ್ಲಿ ದೊಡ್ಡ ಸಂಖ್ಯೆಯ ಜನರು ವಿಧಿಯಿಲ್ಲದೆ ತಮ್ಮ ಹೊಲ,ಗದ್ದೆಗಳನ್ನು ತೊರೆಯಬೇಕಾದೀತು ಮತ್ತು ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಗುಳೇ ಹೋಗಬೇಕಾದೀತು ಎಂದು ಕ್ಯು ಆತಂಕ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ಅಫ್ಘಾನಿಸ್ತಾನದಲ್ಲಿಆಹಾರದ ಅಭದ್ರತೆಯ ಸಮಸ್ಯೆ ಇನ್ನಷ್ಟು ತೀವ್ರವಾಗಲಿದೆ ಹಾಗೂ ಅಫ್ಘಾನಿಸ್ತಾನದ ಸ್ಥಿರತೆಗೆ ಮತ್ತೊಮ್ಮೆ ಬೆದರಿಕೆ ಎದುರಾಗಲಿದೆ ಎಂದು ಅವರು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಬರ ಪರಿಹಾರ ಕಾರ್ಯಗಳಿಗೆ ನೆರವು ನೀಡಲು ವಿಶ್ವ ಆಹಾರ ಹಾಗೂ ಕೃಷಿ ಸಂಸ್ಥೆಗೆ 18 ಮಿಲಿಯ ಡಾಲರ್ಗಳ ಕೊರತೆ ಎದುರಾಗಿದೆಯೆಂದು ಕ್ಯು ತಿಳಿಸಿದ್ದಾರೆ.
ಆದಾಗ್ಯೂ ಮುಂದಿನ ಚಳಿಗಾಲದೊಳಗೆ ಅಫ್ಘಾನಿಸ್ತಾನದ 2.50 ಲಕ್ಷ ಕುಟುಂಬಗಳಿಗೆ ಅಥವಾ 10.50 ಲಕ್ಷ ಜನರಿಗೆ ಎಫ್ಎಓ ನೆರವು ನೀಡುವ ಬಗ್ಗೆ ತನಗೆ ಭರವಸೆಯಿರುವುದಾಗಿ ಅವರು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಅಫ್ಘಾನಿಸ್ತಾನವು ಎರಡನೆ ಬಾರಿಗೆ ತೀವ್ರ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಹಾಗೂ ಅಕ್ಟೋಬರ್ನಿಂದ ಆ ದೇಶದಲ್ಲಿ ಗೋಧಿ ದಾಸ್ತಾನು ಕೂಡಾ ಖಾಲಿಯಾಗಲಿದೆ ಎಂದು ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದೆ.







