ಕಾಬೂಲ್ ವಿಮಾನನಿಲ್ದಾಣ ಸ್ಫೋಟಕ್ಕೆ ಪ್ರತೀಕಾರವಾಗಿ ಐಸಿಸ್-ಕೆ ಉಗ್ರರ ನೆಲೆಗಳ ಮೇಲೆ ಡ್ರೋನ್ ದಾಳಿ: ಅಮೆರಿಕ
ವಾಶಿಂಗ್ಟನ್,ಆ.28: ಕಾಬೂಲ್ ವಿಮಾನನಿಲ್ದಾಣದಲ್ಲಿ ಗುರುವಾರ ಸಂಭವಿಸಿದ ಆತ್ಮಹತ್ಯಾ ಬಾಂಬ್ ದಾಳಿಯ ಹೊಣೆ ಹೊತ್ತಿದ್ದ ಐಸಿಸ್-ಖೊರಾಸಾನ್ ವಿರುದ್ಧ ಪ್ರತೀಕಾರವಾಗಿ ತಾನು ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತದಲ್ಲಿರುವ ಅದರ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಅಮೆರಿಕದ ಸೇನೆ ಶುಕ್ರವಾರ ತಿಳಿಸಿದೆ.
ದಾಳಿಯಲ್ಲಿ ಯೋಜಿತ ಗುರಿಗಳನ್ನು ನಾಶಪಡಿಸಲಾಗಿದೆಯೆಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿರುವುದಾಗಿ ಅಮೆರಿಕ ಸೇನೆಯಸೆಂಟ್ರಲ್ ಕಮಾಂಡ್ನ ಕ್ಯಾಪ್ಟನ್ ಬಿಲ್ ಅರ್ಬನ್ ತಿಳಿಸಿದ್ದಾರೆ.ದಾಳಿಯಲ್ಲಿ ಯಾವುದೇ ನಾಗರಿಕರ ಸಾವುನೋವು ಸಂಭವಿಸಿಲ್ಲವೆಂದು ಅವರು ತಿಳಿಸಿದ್ದಾರೆ. ಕಾಬೂಲ್ ವಿಮಾನನಿಲ್ದಾಣದಲ್ಲಿ ದಾಳಿಯನ್ನು ಖಂಡಿಸಿ ಬೈಡೆನ್ ಗುರುವಾರ ನೀಡಿದ ಹೇಳಿಕೆಯಲ್ಲಿ, ದಾಳಿಯನ್ನು ನಡೆಸಿದವರು ಯಾರೇ ಆಗಿದ್ದರೂ ಅವರನ್ನು ಬೇಟೆಯಾಡಿ ಸದೆಬಡಿಯುತ್ತೇವೆ ಮತ್ತವರು ಬೆಲೆತೆರುವಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಅಫ್ಘಾನಿಸ್ತಾನದ ಹೊರಗಿನಿಂದ ಈ ದಾಳಿಯನ್ನು ಆಯೋಜಿಸಲಾಗಿತ್ತು. ಗುರುವಾರ ಕಾಬೂಲ್ ವಿಮಾನನಿಲ್ದಾಣದಲ್ಲಿ ಆತ್ಮಹತ್ಯಾ ದಾಳಿಯ ಬಳಿಕ ಅಮೆರಿಕ ತೆರವು ಕಾರ್ಯಾಚರಣೆಯನ್ನು ಬಿಗಿಭದ್ರತೆಯ ನಡುವೆ ಪುನಾರಂಭಿಸಿದೆ. ಈ ಆತ್ಮಹತ್ಯಾ ದಾಳಿಯಲ್ಲಿ ಅಮೆರಿಕ ಸೇನೆಯ 13 ಮಂದಿ ಯೋಧರು ಸೇರಿದಂತೆ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಈ ಮಧ್ಯೆ ಐಸಿಸ್-ಕೆ ಬಂಡುಕೋರರು ಮತ್ತೆ ವಿಮಾನನಿಲ್ದಾಣದಲ್ಲಿ ಬಾಂಬ್ ದಾಳಿಯನ್ನು ನಡೆಸುವ ಬೆದರಿಕೆಯಿರುವುದಾಗಿ ಪೆಂಟಗನ್ ವಕ್ತಾರ ಜಾನ್ಕಿರ್ಬಿ ತಿಳಿಸಿದ್ದಾರೆ.





