ಕಾಂಗ್ರೆಸ್ ಪಕ್ಷದಿಂದ 2.5 ಕೋಟಿ ಜನರಿಗೆ ನೆರವು: ಸಲೀಂ ಅಹ್ಮದ್

ಬೆಂಗಳೂರು, ಆ. 28: ಕೋವಿಡ್ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಒಟ್ಟು 2.5 ಕೋಟಿ ಜನರಿಗೆ ಪಡಿತರ, ಔಷಧ ಸೇರಿದಂತೆ ವಿವಿಧ ರೂಪದಲ್ಲಿ ನೆರವು ನೀಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ
ಶನಿವಾರ ಇಲ್ಲಿನ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಘಟಕದ ವತಿಯಿಂದ ಮಾರಪ್ಪನಪಾಳ್ಯದಲ್ಲಿ ನಡೆದ ಉಚಿತ ಪಡಿತರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಪಂಚಾಯತ್ ಮಟ್ಟದಿಂದ ಪಾರ್ಲಿಮೆಂಟ್‍ವರೆಗೂ ಕೋವಿಡ್‍ನಿಂದ ಸಿಲುಕಿದ ಜನರಿಗೆ ಸ್ಪಂದಿಸಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸ್ವಂತ ಹಣದಿಂದ 2.5 ಕೋಟಿಯಷ್ಟು ಬಡವರಿಗೆ ನೆರವಾಗಿದೆ ಎಂದರು.
ರಾಜ್ಯ ಸರಕಾರ ಮಾಡುವ ಕೆಲಸ ನಮ್ಮ ಪಕ್ಷ ಮಾಡಿದೆ. ಕಾಂಗ್ರೆಸ್ ಪಕ್ಷವು ನಿರಂತರವಾಗಿ ಜನರ ಪರವಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಕೊರೋನ ಮೂರನೇ ಅಲೆಯ ಮುನ್ಸೂಚನೆ ಇದ್ದರೂ ರಾಜ್ಯ ಸರಕಾರ ಅದಕ್ಕೆ ಬೇಕಾದ ಸಿದ್ಧತೆಯನ್ನು ಇನ್ನೂ ಮಾಡಿಕೊಂಡಿಲ್ಲ. ಮೂರನೇ ಅಲೆ ಮಕ್ಕಳನ್ನು ಕಾಡಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಸರಕಾರ ಯಾವುದೇ ಕಾಳಜಿ ವಹಿಸುತ್ತಿಲ್ಲ ಎಂದು ಸಲೀಂ ಅಹ್ಮದ್ ದೂರಿದರು.
ರಾಜ್ಯದ ವಿವಿಧೆಡೆಗಳಲ್ಲಿ ಜನರಿಗೆ ಲಸಿಕೆ ಸಿಗುತ್ತಿಲ್ಲ. ಎರಡು ತಿಂಗಳಲ್ಲಿ ಕಾಂಗ್ರೆಸ್ ಪಕ್ಷವು 224 ಕ್ಷೇತ್ರದಲ್ಲಿ ಜನರ ಪರವಾಗಿ ಕೆಲಸ ಮಾಡಿದೆ. ಪಕ್ಷದ ವತಿಯಿಂದ 1,700 ಆ್ಯಂಬುಲೆನ್ಸ್ ಒದಗಿಸಲಾಗಿದೆ. 26 ಲಕ್ಷ ದಿನಸಿ ಕಿಟ್‍ಗಳನ್ನು ಬಡವರಿಗೆ ಹಂಚಿದ್ದೇವೆ. 93 ಲಕ್ಷ ಆಹಾರ ಕಿಟ್‍ಗಳನ್ನು ಪೂರೈಸಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಕಾಪೆರ್Çೀರೇಟರ್‍ಗಳಾದ ಶಿವರಾಜ್, ಕೇಶವಮೂರ್ತಿ, ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಮಾಜಿ ಅಧ್ಯಕ್ಷ ಮನೋಹರ್, ಕೃಷ್ಣಮೂರ್ತಿ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.







