ಅಸ್ಸಾಂ ಪೊಲೀಸರು ನಮ್ಮ ಮೇಲೆ ದಾಳಿಗೆ ಗುಂಪನ್ನು ಪ್ರಚೋದಿಸಿರಬಹುದು: ಗಾಯಾಳು ಮೇಘಾಲಯ ಡಿಎಸ್ಪಿ

ಸಾಂದರ್ಭಿಕ ಚಿತ್ರ
ಶಿಲ್ಲಾಂಗ್,ಆ.28: ಪ್ರದೇಶದಲ್ಲಿ ತೊಂದರೆಯ ಬಗ್ಗೆ ಮೊದಲೇ ಗ್ರಹಿಸಿ ‘ಯುದ್ಧ ಸನ್ನದ್ಧ ’ರಾಗಿದ್ದ ಅಸ್ಸಾಂ ಪೊಲೀಸ್ ತನ್ನ ಮೇಲೆ ದಾಳಿ ನಡೆದಾಗ ತನಗೆ ನೆರವಾಗಿರಲಿಲ್ಲ ಎಂದು ಅಸ್ಸಾಂ ಜೊತೆಯ ಗಡಿಯಲ್ಲಿ ಗುಂಪು ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮೇಘಾಲಯದ ಡಿಎಸ್ಪಿ ಫಿರೋಝ್ ರಹಮಾನ್ ಅವರು ಶನಿವಾರ ಆರೋಪಿಸಿದ್ದಾರೆ. ಇಲಾಖೆಯ ಕೆಲವು ಸಿಬ್ಬಂದಿಗಳ ಪ್ರಚೋದನೆ ಗುಂಪಿನಿಂದ ದಾಳಿಗೆ ಕಾರಣವಾಗಿರಬಹುದು ಎಂದು ಅವರು ಹೇಳಿದ್ದಾರೆ.
ಉಮ್ಲಾಪೇರ್ನಲ್ಲಿ ಅಸ್ಸಾಂ ಪೊಲೀಸರು ಸ್ಥಾಪಿಸಿದ್ದ ಶಿಬಿರಕ್ಕೆ ಮಂಗಳವಾರ ಸ್ಥಳೀಯರು ಮುತ್ತಿಗೆ ಹಾಕಿದ್ದರು. ರಿ-ಭೊಯಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಹ್ಮಾನ್ ಅವರನ್ನು ಬುಧವಾರ ಜಿಲ್ಲಾಡಳಿತವು ಪರಿಸ್ಥಿತಿಯ ಮೇಲೆ ನಿಗಾಯಿರಿಸಲು ಅಲ್ಲಿಗೆ ರವಾನಿಸಿತ್ತು.
‘ನಾನು ನನ್ನ ತಂಡದೊಂದಿಗೆ ವಿವಾದಿತ ಸ್ಥಳವನ್ನು ತಲುಪಿದಾಗ ಒಳಪ್ರವೇಶಿಸಲು ಗುಂಪು ಅವಕಾಶ ನೀಡಿತ್ತು. ಆದರೆ ಅಲ್ಲಿಂದ ಮರಳುವಾಗ ನಮ್ಮನ್ನು ತಡೆದಿತ್ತು. ಅಸ್ಸಾಂ ಪೊಲೀಸರು ರಕ್ಷಣೆಯನ್ನು ಒದಗಿಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ, ಆದರೆ ನೆರವಿಗಾಗಿ ನಮ್ಮ ಕರೆಗಳಿಗೆ ಅವರು ಸ್ಪಂದಿಸಿರಲಿಲ್ಲ. ಸ್ಥಳೀಯ ಯುವಕರು ನಮ್ಮ ಮೇಲೆ ಹಲ್ಲೆ ನಡೆಸಿದ್ದರು. ನೇಪಾಳಿಗಳು ಮತ್ತು ಕರ್ಬಿ ಜನರೂ ಬಂದು ನನ್ನ ಮತ್ತು ನನ್ನ ಚಾಲಕವ ಮೇಲೆ ದಾಳಿ ನಡೆಸಿದ್ದರು ’ಎಂದು ರಹಮಾನ್ ಸುದ್ದಿಗಾರರಿಗೆ ತಿಳಿಸಿದರು. ಗಂಭೀರವಾಗಿ ಗಾಯಗೊಂಡಿರುವ ಅವರು ಶಿಲಾಂಗ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಅವರು ತನ್ನ ಚಾಲಕನನ್ನು ಭತ್ತದ ಗದ್ದೆಗೆ ಎಸೆದಿದ್ದರು, ತಾನು ಹೇಗೋ ಅಲ್ಲಿಂದ ಪರಾರಿಯಾಗಿದ್ದೆ. ಅಲ್ಲಿಯೇ ಇದ್ದಿದ್ದರೆ ಅವರು ತನ್ನನ್ನು ಕೊಲ್ಲುತ್ತಿದ್ದರು ಎಂದ ರಹಮಾನ್,‘ನಮ್ಮ ಕಡೆಯಿಂದ ಯಾವುದೇ ಪ್ರಚೋದನೆ ಇರಲಿಲ್ಲ. ಮಂಗಳವಾರ ನಮ್ಮಿಂದಿಗೆ ಚೆನ್ನಾಗಿಯೇ ಮಾತನಾಡಿದ್ದ ಜನರು ಬುಧವಾರ ನಮ್ಮ ಮೇಲೆ ದಾಳಿ ನಡೆಸಿದ್ದರು. ಕೆಲವು ಅಸ್ಸಾಂ ಪೊಲೀಸ್ ಸಿಬ್ಬಂದಿಗಳು ಗುಂಪನ್ನು ಪ್ರಚೋದಿಸಿದ್ದರು ಎಂದು ನಾನು ಭಾವಿಸಿದ್ದೇನೆ,ಇದೇ ಕಾರಣದಿಂದ ಅವರು ನಮ್ಮ ನೆರವಿಗೆ ಬರಲಿಲ್ಲ ’್ಲ ಎಂದರು.
ಉಮ್ಲಾಪೇರ್ ಸೇರಿದಂತೆ ಅಸ್ಸಾಂ ಮತ್ತು ಮೇಘಾಲಯ ಗಡಿಯಲ್ಲಿ ಕನಿಷ್ಠ 12 ಕಡೆ ವಿವಾದಗಳಿದ್ದು,ಆಗಾಗ್ಗೆ ಘರ್ಷಣೆಗಳು ನಡೆಯುತ್ತಿರುತ್ತವೆ.
ವರ್ಷಕ್ಕೆ ಎರಡು ಸಲ ಮಾತುಕತೆಗಳನ್ನು ನಡೆಸುವ ಮೂಲಕ ದೀರ್ಘಾವಧಿಯಿಂದ ಬಾಕಿಯುಳಿದಿರುವ ಉಭಯ ರಾಜ್ಯಗಳ ನಡುವಿನ ಗಡಿಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ.ಸಂಗ್ಮಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಒಪ್ಪಿಕೊಂಡಿದ್ದಾರೆ.







