ಕರ್ನಾಟಕ ಮುಕ್ತ ವಿವಿಯಲ್ಲಿ ವ್ಯಾಪಕ ಭ್ರಷ್ಟಾಚಾರ: ಕುಲಪತಿ ಡಾ.ಎಸ್.ವಿದ್ಯಾಶಂಕರ್ ರಿಂದ ಸಂಸ್ಥೆ ದಿವಾಳಿ ಅಂಚಿಗೆ; ಆರೋಪ
ಬೆಂಗಳೂರು, ಆ 28; `ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಕುಲಪತಿ ಡಾ.ಎಸ್.ವಿದ್ಯಾಶಂಕರ್ ಇದೆಲ್ಲದಕ್ಕೂ ಸೂತ್ರಧಾರಿಗಳಾಗಿದ್ದಾರೆ. ಮುಕ್ತ ವಿ.ವಿ. ದಿವಾಳಿ ಅಂಚಿಗೆ ಬಂದು ನಿಂತಿದ್ದು, ಇದರ ಸಂಪೂರ್ಣ ಹೊಣೆಯನ್ನು ಅವರೇ ಹೊರಬೇಕು' ಎಂದು ಆರೋಪಿಸಲಾಗಿದೆ.
ಶನಿವಾರ ಇಲ್ಲಿನ ಪ್ರೆಸ್ ಕ್ಲಬ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಹಾಗೂ ನಿವೃತ್ತ ಡೀನ್ ಡಾ.ಚಂಬಿ ಪುರಾಣಿಕ್, ವಿಶ್ವ ವಿದ್ಯಾಲಯದ ಭವಿಷ್ಯದ ಬಗ್ಗೆ ತೀವ್ರ ಆತಂಕ ತೋಡಿಕೊಂಡರು. ಸಾಮಾಜಿಕ ನ್ಯಾಯದ ಬಗ್ಗೆ ಅಪಾರ ಕಾಳಜಿ, ಕಳಕಳಿ ಹೊಂದಿರುವ, ಶಿಕ್ಷಣ ಕ್ಷೇತ್ರದ ಸುಧಾರಣೆ ಕುರಿತು ಒಲವು ಹೊಂದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೂಡಲೇ ಮಧ್ಯ ಪ್ರವೇಶಿಸಿ, ವಿಶ್ವವಿದ್ಯಾಲಯವನ್ನು ರಕ್ಷಿಸಬೇಕು. ವಿವಿಯನ್ನು ಲೂಟಿ ಮಾಡುತ್ತಿರುವ, ದಿವಾಳಿ ಅಂಚಿಗೆ ತಂದು ನಿಲ್ಲಿಸುತ್ತಿರುವ ಅವೈಜ್ಞಾನಿಕ ನಿರ್ಧಾರಗಳಿಗೆ ತಡೆ ನೀಡಬೇಕು ಎಂದು ಒತ್ತಾಯಿಸಿದರು.
ವಿಶ್ವ ವಿದ್ಯಾಲಯದಲ್ಲಿ ಕೆಲವೇ ವರ್ಷಗಳ ಹಿಂದೆ 1.15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಇದೀಗ ಈ ಸಂಖ್ಯೆ ಕೇವಲ 20 ರಿಂದ 25 ಸಾವಿರಕ್ಕೆ ಕುಸಿತ ಕಂಡಿದೆ. ಈ ಹಿಂದೆ 50 ಜನ ಖಾಯಂ ಮತ್ತು 20 ಮಂದಿ ಅರೆ ಕಾಲಿಕ ಬೋಧಕ ಸಿಬ್ಬಂದಿ ಸಂಖ್ಯೆ ಇತ್ತು. ಈಗ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದರೂ ಈಗಲೂ ಇದೇ ಪ್ರಮಾಣದ ಸಿಬ್ಬಂದಿ ಮುಂದುವರೆದಿದ್ದಾರೆ. ಇದರ ಜತೆಗೆ ವಿ.ವಿ. ಕುಲಪತಿ ಅವರು ಮತ್ತೆ ಹೊಸಗಾಗಿ 40 ಮಂದಿ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳಲು ಹೊರಟಿದ್ದಾರೆ. ಇದೊಂದು ಬಹುದೊಡ್ಡ ಅಕ್ರಮಕ್ಕೆ ನಾಂದಿಯಾಗುತ್ತದೆ. ಈಗ ನೇಮಕಾತಿ ಅಗತ್ಯವಿಲ್ಲ. ಇದರಿಂದ ವಿನಾಕಾರಣ ಆರ್ಥಿಕ ಹೊರೆ ಉಂಟಾಗುತ್ತದೆ ಎಂದು ಆರೋಪಿಸಿದರು.
ವಿಶ್ವವಿದ್ಯಾಲಯದಲ್ಲಿ 20 ಕ್ಕೂ ಹೆಚ್ಚು ವಿಸ್ತರಣಾ ಕೇಂದ್ರಗಳಿವೆ. ಈ ಪೈಕಿ ಕೆಲವು ಕೇಂದ್ರಗಳು ಮುಚ್ಚಿವೆ. ಹೀಗಿದ್ದರೂ ಧಾರವಾಡ, ಕಲಬುರಗಿ ಸೇರಿ ಮೂರು ಕಡೆಗಳಲ್ಲಿ ಪ್ರಾದೇಶಿಕ ಕೇಂದ್ರಗಳ ಕಟ್ಟ ನಿರ್ಮಿಸಲು ಟೆಂಡರ್ ಕರೆದಿದ್ದಾರೆ. ಇದಕ್ಕೆ ಸುಮಾರು 75 ರಿಂದ 80 ಕೋಟಿ ರೂ.ವೆಚ್ಚವಾಗಲಿದ್ದು, ಈಗಿರುವ ವಿಸ್ತರಣಾ ಕೇಂದ್ರಗಳೇ ಕಾರ್ಯನಿರ್ವಹಿಸುತ್ತಿಲ್ಲ. ಇದೀಗ ಮತ್ತೆ ಮೂರು ಕಟ್ಟಡಗಳನ್ನು ನಿರ್ಮಿಸುತ್ತಿರುವ ಔಚಿತ್ಯ ಅರ್ಥವಾಗುತ್ತಿಲ್ಲ. ಇದೀಗ ವಿಶ್ವವಿದ್ಯಾಲಯದ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕುಲಪತಿ ಅವರು ಆದ್ಯತೆ ನೀಡಬೇಕು. ಆದರೆ ಕಟ್ಟಡ ನಿರ್ಮಿಸವಲು ಆದ್ಯತೆ ನೀಡುವ ಮೂಲಕ ಗುತ್ತಿಗೆದಾರರ ಕೆಲಸ ಮಾಡಲು ಮುಂದಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ವರ್ಷಗಳ ಹಿಂದೆ ವಿವಿಯಲ್ಲಿ 800 ಕೋಟಿ ರೂ.ಹಣ ಇತ್ತು. ಇಂತಹ ಅವೈಜ್ಞಾನಿಕ ಮತ್ತು ಯೋಗ್ಯವಲ್ಲದ ತೀರ್ಮಾನಗಳಿಂದ ಶೇ.50ರಷ್ಟು ಆರ್ಥಿಕ ಸಂಪನ್ಮೂಲ ಕರಗಿ ಹೋಗಿದೆ. ಅಲ್ಲದೆ, ವಾರ್ಷಿಕ 35 ರಿಂದ 40 ಕೋಟಿ ರೂ.ಮೊತ್ತವನ್ನು ಸಂಬಳ, ಸಾರಿಗೆ ಮತ್ತಿತರ ಆಡಳಿತಾತ್ಮಕ ಉದ್ದೇಶಗಳಿಗಾಗಿ ವಿನಿಯೋಗಿಸಲಾಗುತ್ತಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ವಿವಿಗೆ ಆದಾಯ ಬರುತ್ತಿಲ್ಲ. ಇಷ್ಟೊಂದು ಸಂಕಷ್ಟ ಪರಿಸ್ಥಿತಿ ಇರುವಾಗಲೂ ವಿವಿ ಕುಲಪತಿ ಅವರು ಹಣ ಕರಗಿಸುವ ವಿವಿಧ ಮಾರ್ಗಗಳನ್ನೇ ಹುಡುಕುತ್ತಿದ್ದಾರೆ. ನಿಜಕ್ಕೂ ಇದು ಆತಂಕಕಾರಿ ಬೆಳವಣಿಗೆ ಎಂದು ಅವರುಗಳು ಕಳವಳ ವ್ಯಕ್ತಪಡಿಸಿದರು.
ಹಾಲಿ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಅವರ ಆಡಳಿತ ಅವಧಿಯಲ್ಲಿ ಮಾಡಿರುವ ಖರ್ಚು-ವೆಚ್ಚಗಳು, ತೀರ್ಮಾನಗಳ ಕುರಿತಂತೆ ಶ್ವೇತಪತ್ರ ಹೊರಡಿಸಬೇಕು. ವಿವಿಯ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಹಾಗೊಂದು ವೇಳೆ ತನಿಖಾ ಸಮಿತಿ ರಚಿಸಿದ್ದೇ ಆದಲ್ಲಿ ಖುದ್ದಾಗಿ ನಾವೇ ಹಾಜರಾಗಿ ಅಕ್ರಮ ಕುರಿತಾದ ಎಲ್ಲ ದಾಖಲೆಗಳನ್ನು ನೀಡುತ್ತೇವೆ ಎಂದು ಕರ್ನಾಟಕ ಮುಕ್ತ ವಿ.ವಿ.ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಹಾಗೂ ನಿವೃತ್ತ ಡೀನ್ ಡಾ.ಚಂಬಿ ಪುರಾಣಿಕ್ ಹೇಳಿದರು.







