ಡ್ರಗ್ಸ್ ಪ್ರಕರಣ: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಮುಂಬೈ ಮನೆ ಮೇಲೆ ದಾಳಿ ನಡೆಸಿದ ಬಳಿಕ ಬಂಧನ

photo: INSTAGRAM
ಮುಂಬೈ: ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ (ಎನ್ಸಿಬಿ) ದಿಂದ ವಿಚಾರಣೆಗೊಳಪಡುತ್ತಿದ್ದ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅವರ ಮುಂಬೈಯಲ್ಲಿರುವ ಮನೆಯಿಂದ ನಿಷೇಧಿತ ಡ್ರಗ್ಸ್ ಗಳನ್ನು ವಶಪಡಿಸಿಕೊಂಡ ಬಳಿಕ ಇಂದು ಬೆಳಗ್ಗೆ ಬಂಧಿಸಲಾಗಿದೆ.
ಕೊಹ್ಲಿ ಅವರನ್ನು ಎನ್ ಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ ಎಂದು ಎಎನ್ ಐ ಟ್ವೀಟ್ ಮಾಡಿದೆ.
ಡ್ರಗ್ಸ್ ವಿರೋಧಿ ಏಜೆನ್ಸಿಯ ತಂಡ ಶನಿವಾರ ಅಕ್ರಮ ಡ್ರಗ್ಸ್ ಹೊಂದಿದ್ದ ಒಬ್ಬ ಪ್ರಮುಖ ಡ್ರಗ್ ಪೆಡ್ಲರ್ ಅಜಯ್ ರಾಜು ಸಿಂಗ್ ಅವರನ್ನು ವಶಕ್ಕೆ ಪಡೆದಿದೆ.
ಆರೋಪಿ ಅಜಯ್ ರಾಜು ಸಿಂಗ್ ಅವರ ಪ್ರಾಥಮಿಕ ವಿಚಾರಣೆಯ ಆಧಾರದ ಮೇಲೆ ಅದೇ ದಿನ ಮುಂದಿನ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಸಿಂಗ್ ಮಾಹಿತಿಯ ಪ್ರಕಾರ, ಎನ್ ಸಿಬಿಯ ತಂಡವು ಉಪನಗರ ಅಂಧೇರಿಯಲ್ಲಿರುವ ಅರ್ಮಾನ್ ಕೊಹ್ಲಿ ಅವರ ಮನೆಯ ಮೇಲೆ ದಾಳಿ ನಡೆಸಿತು ಹಾಗೂ ಆತನಿಂದ ಸಣ್ಣ ಪ್ರಮಾಣದ ಕೊಕೇನ್ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಎನ್ಸಿಬಿ ತಂಡವು ನಂತರ ನಟನನ್ನು ವಿಚಾರಣೆಗಾಗಿ ದಕ್ಷಿಣ ಮುಂಬೈನ ತನ್ನ ಕಚೇರಿಗೆ ಕರೆದೊಯ್ದಿತು ಎಂದು ಮೂಲಗಳು ತಿಳಿಸಿವೆ.
ನಟ ಸಲ್ಮಾನ್ ಖಾನ್ ನಟನೆಯ 'ಪ್ರೇಮ್ ರತನ್ ಧನ್ ಪಾಯೋ' ಸಹಿತ ಇತರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.
ಕೊಹ್ಲಿ ಬಂಧನಕ್ಕೆ ಒಂದು ದಿನ ಮೊದಲು ಕೇಂದ್ರ ಮಾದಕದ್ರವ್ಯ ವಿರೋಧಿ ಸಂಸ್ಥೆ ಟಿವಿ ನಟ ಗೌರವ್ ದೀಕ್ಷಿತ್ ಅವರನ್ನು ಬಂಧಿಸಿತ್ತು.







