ನೆಹರು ಫೋಟೊವನ್ನು ಕೈಬಿಟ್ಟಿರುವ ಕೇಂದ್ರ ಸರಕಾರಿ ಸಂಸ್ಥೆಯ ವಿವರಣೆ ‘ಹಾಸ್ಯಾಸ್ಪದ’ ಎಂದ ಚಿದಂಬರಂ

ಹೊಸದಿಲ್ಲಿ: ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲು ರೂಪಿಸಿರುವ ಮೊದಲ ಡಿಜಿಟಲ್ ಪೋಸ್ಟರ್‌ನಿಂದ ಜವಾಹರಲಾಲ್ ನೆಹರು ಅವರ ಛಾಯಾಚಿತ್ರವನ್ನು ಕೈಬಿಟ್ಟಿರುವ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ಐಸಿಎಚ್‌ಆರ್) ವಿರುದ್ಧ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ರವಿವಾರ ವಾಗ್ದಾಳಿ ನಡೆಸಿದರು.
ಐಸಿಎಚ್‌ಆರ್‌ನ ಸದಸ್ಯ ಕಾರ್ಯದರ್ಶಿಯು ದ್ವೇಷ ಹಾಗೂ ಪೂರ್ವಾಗ್ರಹಕ್ಕೆ ತಲೆಬಾಗಿರುವುದಾಗಿ ಆರೋಪಿಸಿದರು.
"ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮಾಚರಣೆಯ ಮೊದಲ ಡಿಜಿಟಲ್ ಪೋಸ್ಟರ್‌ನಿಂದ ಜವಾಹರಲಾಲ್ ನೆಹರು ಅವರ ಫೋಟೊವನ್ನು ಕೈಬಿಟ್ಟಿದ್ದಕ್ಕಾಗಿ ಐಸಿಎಚ್‌ಆರ್ ಸದಸ್ಯ-ಕಾರ್ಯದರ್ಶಿ ನೀಡಿದ್ದ ವಿವರಣೆಯು ಹಾಸ್ಯಾಸ್ಪದವಾಗಿದೆ. ಪೂರ್ವಾಗ್ರಹ ಹಾಗೂ ದ್ವೇಷಕ್ಕೆ ತಲೆಬಾಗಿದ ನಂತರ ಸದಸ್ಯ-ಕಾರ್ಯದರ್ಶಿ ಬಾಯಿ ಮುಚ್ಚುಕೊಂಡಿರುವುದು ಉತ್ತಮ" ಎಂದು ಚಿದಂಬರಂ ಟ್ವೀಟಿಸಿದ್ದಾರೆ.
ಕಾರು ಸಂಶೋಧನೆಯಾದ ದಿನ ಆಚರಿಸುವ ವೇಳೆ ಹೆನ್ರಿ ಫೋರ್ಡ್ ಅವರ ಚಿತ್ರವನ್ನು ಕೈಬಿಡುತ್ತೀರಾ, ವಿಮಾನ ಕಂಡುಹಿಡಿದ ದಿನದ ಸಂಭ್ರಮಾಚರಣೆಗೆ ರೈಟ್ ಸಹೋದರರ ಚಿತ್ರವನ್ನು ಕೈಬಿಡುತ್ತೀರಾ? ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಮೋಟಾರು ಕಾರನ್ನು ಮೊದಲು ಕಂಡುಹಿಡಿದವರು ಹೆನ್ರಿ ಫೋರ್ಡ್ ಮತ್ತು ವಿಶ್ವದ ಮೊದಲ ವಿಮಾನವನ್ನು ನಿರ್ಮಿಸಿದ ಮತ್ತು ಹಾರಿಸಿದ ಕೀರ್ತಿ ರೈಟ್ ಸಹೋದರರಿಗೆ ಸಲ್ಲುತ್ತದೆ.
ಐಸಿಎಚ್‌ಆರ್ 'ಆಝಾದಿ ಕಾ ಅಮೃತ್ ಮಹೋತ್ಸವ' ಆಚರಣೆಯ ಪೋಸ್ಟರ್‌ನಿಂದ ನೆಹರು ಅವರ ಚಿತ್ರವನ್ನು ಹೊರಗಿಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳು ಕೇಂದ್ರ ಸರಕಾರಿ ಸಂಸ್ಥೆಯೊಂದರ ಈ ಕ್ರಮವನ್ನು ತೀವ್ರವಾಗಿ ಟೀಕಿಸಿವೆ.







