ಪೂರಕ ಚಾರ್ಜ್ ಶೀಟ್ ಸಲ್ಲಿಕೆ ವಿಳಂಬ ಜಾಮೀನಿಗೆ ಆಧಾರವಲ್ಲ: ಹೈಕೋರ್ಟ್

ಬೆಂಗಳೂರು, ಆ.29: ಪೂರಕ ಚಾರ್ಜ್‍ಶೀಟ್ ಎನ್ನುವುದು ಆರೋಪಿಗಳ ವಿರುದ್ಧ ಸಂಗ್ರಹಿಸಿದ ಹೆಚ್ಚುವರಿ ದಾಖಲೆಯೇ ಹೊರತು ಡಿಫಾಲ್ಟ್ ಜಾಮೀನು ನೀಡಲು ಆಧಾರವಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಹಾರಾಷ್ಟ್ರದ ಸೋಲಾಪುರದ ನಿವಾಸಿ ಸಂತೋಷ್ ಕದಮ್ ಎಂಬಾತ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆರೋಪಿತನ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ
ಸಿಆರ್‍ಪಿಸಿ ಸೆಕ್ಷನ್ 167(2) ಚಾರ್ಜ್ ಶೀಟ್ ಹಾಕದಿದ್ದಾಗ ಮಾತ್ರ ಅನ್ವಯವಾಗುತ್ತದೆ. ಹಾಗೆಯೇ ತನಿಖೆಯ ಸಂದರ್ಭದಲ್ಲಿ ಆರೋಪಿಯನ್ನು ಬಂಧಿಸಿದಾಗ ಅದು ಕಾರ್ಯಾರಂಭಗೊಳ್ಳುತ್ತದೆ. ಆದರೆ ನಿರ್ದಿಷ್ಟ ಆರೋಪಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದಾಗ ಮತ್ತು ಇತರ ಆರೋಪಿಗಳ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿದಾಗ ಹೆಚ್ಚುವರಿ ಪುರಾವೆಗಳಾಗುತ್ತವೆ. ಇಂತಹ ಸಂದರ್ಭದಲ್ಲಿ ಸಿಆರ್‍ಪಿಸಿ ಸೆಕ್ಷನ್ 167 (2) ರ ನಿಬಂಧನೆಗಳು ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಏನಿದು ಪ್ರಕರಣ: ಕೊಪ್ಪಳ ಜಿಲ್ಲೆಯ ಬೇವೂರು ಠಾಣೆ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ಸಂಬಂಧ ಎಫ್‍ಐಆರ್ ದಾಖಲಿಸಿದ್ದರು. ಅದರ ತನಿಖೆ ನಡೆಸಿ 2021ರ ಜ.4ರಂದು ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದೇ ಪ್ರಕರಣದಲ್ಲಿ ಮಹಾರಾಷ್ಟ್ರದ ಸೋಲಾಪುರದ ನಿವಾಸಿ ಸಂತೋಷ್ ಕದಮ್ ಎಂಬುವರನ್ನು ಕಳ್ಳತನ ಮಾಡಿದ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ 2021 ರ ಫೆ.6ರಂದು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ಸಂತೋಷ್ ಸಲ್ಲಿಸಿದ್ದ ಅರ್ಜಿಯನ್ನು ಕೊಪ್ಪಳದ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು.
ಆ ಬಳಿಕ ಹೈಕೋರ್ಟ್‍ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಸಂತೋಷ್, ಪೊಲೀಸರು 2021 ಮೇ 17 ರಂದು ಪೂರಕ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆರೋಪಿತನನ್ನು ಬಂಧಿಸಿದ ದಿನದಿಂದ 90 ದಿನಗಳ ಒಳಗೆ ಪೂರಕ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಹೀಗಾಗಿ, ಸಿಆರ್‍ಪಿಸಿ ಸೆಕ್ಷನ್ 167 (2) ರ ಅಡಿಯಲ್ಲಿ ಶಾಸನಬದ್ಧ ಜಾಮೀನು ಪಡೆಯಲು ಆರೋಪಿ ಅರ್ಹರಾಗಿದ್ದಾರೆ ಎಂದು ವಾದಿಸಿದ್ದರು.







