ಕರಾವಳಿ ಸೇರಿ ಹತ್ತು ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆ ಸಾಧ್ಯತೆ: ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು, ಆ. 29: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡ ಹಿನ್ನೆಲೆಯಲ್ಲಿ ನಾಳೆ(ಆ.30)ಯಿಂದ ರಾಜ್ಯದ 10 ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಹೀಗಾಗಿ, ಮುಂದಿನ 48 ಗಂಟೆಗಳ ವರೆಗೆ ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಹಾಗೂ ಬೆಂಗಳೂರಿನಲ್ಲಿ ಸೋಮವಾರ ಮಳೆ ಹೆಚ್ಚಾಗಲಿದೆ. ಹೀಗಾಗಿ, ಈ ಜಿಲ್ಲೆಗಳಲ್ಲಿ ಆ.30ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆ. 31ರಂದು ರಾಜ್ಯದ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ರಾಜ್ಯದ ಹಲವೆಡೆ ಭಾರೀ ವರ್ಷಧಾರೆಯಾಗಿತ್ತು. ಜುಲೈ ತಿಂಗಳಲ್ಲಿ ಬಿದ್ದ ಮಳೆಯ ವೇಳೆ ನದಿ, ಹಳ್ಳಕೊಳ್ಳ, ಕೆರೆಗಳು ಉಕ್ಕಿ ಹರಿದಿದ್ದವು. ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಜನಜೀವನ ಅಸ್ತವ್ಯಸ್ತವಾಗಿತ್ತು. ಆಗಸ್ಟ್ ಮೊದಲ ವಾರದಲ್ಲಿಯೂ ಕರಾವಳಿ, ಮಳೆನಾಡು ಭಾಗಗಳಲ್ಲಿ ಮಳೆಯಾಗಿತ್ತು. ನಂತರ ಅಬ್ಬರ ಕಡಿಮೆಯಾಗಿತ್ತು.





