ಮಂಗಳೂರು: ಹಿರಿಯ ಟ್ರಾಫಿಕ್ ವಾರ್ಡನ್ ಜೋಸೆಫ್ ಗೊನ್ಸಾಲ್ವಿಸ್ ನಿಧನ

ಮಂಗಳೂರು, ಆ.29: ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಹಿರಿಯ ಟ್ರಾಫಿಕ್ ವಾರ್ಡನ್ ಆಗಿದ್ದ ಜೋಸೆಫ್ ಗೊನ್ಸಾಲ್ವಿಸ್ (99)ರವಿವಾರ ನಿಧನರಾಗಿದ್ದಾರೆ.
ನಗರದ ಫಳ್ನೀರ್ ನಿವಾಸಿಯಾಗಿದ್ದ ಅವರು ನಗರದಲ್ಲಿ ಸಮಾಜ ಸೇವೆಯ ಮೂಲಕ ಅದರಲ್ಲೂ ಟ್ರಾಫಿಕ್ ವಾರ್ಡನ್ ಆಗಿ ಜನಮೆಚ್ಚುಗೆ ಪಡೆದಿದ್ದರು. 1921ರ ಜ.1ರಂದು ಜನಿಸಿದ್ದ ಅವರು ಬ್ರಿಟಿಷ್ ಕಂಪೆನಿಯ ಉದ್ಯೋಗಿಯಾಗಿದ್ದರು. ಬಳಿಕ ಆ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಗಮನ ಸೆಳೆದಿದ್ದರು.
ನಿವೃತ್ತಿಯ ಬಳಿಕ ಮಂಗಳೂರಿನಲ್ಲಿ ನೆಲೆಸಿದ್ದ ಅವರು ತನ 94ನೇ ಹರೆಯದಲ್ಲಿ ಅಂದರೆ 2015ರಲ್ಲಿ ಮಂಗಳೂರು ನಗರ ಟ್ರಾಫಿಕ್ ವಾರ್ಡನ್ ಆಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮತ್ತು ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದರು.
ಇವರ ನಿಧನದ ಕುರಿತು ಸಂತಾಪ ಸೂಚಿಸಿರುವ ಬ್ಯಾರೀಸ್ ಗ್ರೂಪ್ ನ ಚೇರ್ ಮ್ಯಾನ್ ಸೈಯದ್ ಬ್ಯಾರಿ "ಅವರು ಯುವ ಹೃದಯದ ಚೈತನ್ಯ ಚಿಲುಮೆಯಾಗಿದ್ದರು. ಅವರು ತಮ್ಮ ವಯಸ್ಸಿನ ಶತಕದ ಗಡಿ ದಾಟುತ್ತಾರೆಂಬ ವಿಶ್ವಾಸ ನನಗಿತ್ತು. 1990ರಲ್ಲಿ ನಾವು ಅನಿರೀಕ್ಷಿತವಾಗಿ ಭೇಟಿಯಾಗಿದ್ದೆವು. ಅಂದಿನಿಂದ ಅವರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ನನ್ನೊಂದಿಗೆ ಸಂಪರ್ಕದಲ್ಲಿರುತ್ತಿದ್ದರು. ತನ್ನನ್ನು ಪ್ರೀತಿಸುವವರಿಗಾಗಿ ಸದಾ ಸಮಯ ಮೀಸಲಿಡುತ್ತಿದ್ದರು. ಅವರು ಹಲವರಿಗೆ ಸ್ಫೂರ್ತಿಯಾಗಿದ್ದರು. ಅವರ ಜೊತೆಗೆ ಹೆಚ್ಚಿನ ಕ್ಷಣಗಳನ್ನು ಕಳೆಯಲಾಗಲಿಲ್ಲ ಎಂಬ ದುಃಖ ನನಗಿದೆ" ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.







