ಸಿಇಟಿ ಪರೀಕ್ಷೆ: 2ನೇ ದಿನ ಒಟ್ಟು 320 ಮಂದಿ ಗೈರು
ಉಡುಪಿ, ಆ.29: ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಎರಡನೇ ದಿನವಾದ ರವಿವಾರ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಷಯಗಳಿಗೆ ಸಂಬಂಧಿಸಿ ನಡೆದ ಪರೀಕ್ಷೆಗೆ ಒಟ್ಟು 320 ಮಂದಿ ಗೈರುಹಾಜರಾಗಿದ್ದರು.
ಬೆಳಗ್ಗೆ ನಡೆದ ಭೌತಶಾಸ್ತ್ರ ಹಾಗೂ ಅಪರಾಹ್ನ ನಡೆದ ರಸಾಯನ ಶಾಸ್ತ್ರ ಪರೀಕ್ಷೆಗೆ ತಲಾ 3597 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೊಂದಾ ಯಿಸಿಕೊಂಡಿದ್ದು, ಇವರಲ್ಲಿ ಭೌತಶಾಸ್ತ್ರಕ್ಕೆ 158 ಮಂದಿ ಹಾಗೂ ರಸಾಯನ ಶಾಸ್ತ್ರಕ್ಕೆ 162 ಸೇರಿ ಒಟ್ಟು 320 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಭೌತಶಾಸ್ತ್ರಕ್ಕೆ 1699 ಬಾಲಕರು, 1740 ಮಂದಿ ಬಾಲಕಿಯರು ಸೇರಿದಂತೆ 3439 ಮಂದಿ ಹಾಜರಾದರೆ, ರಸಾಯನ ಶಾಸ್ತ್ರಕ್ಕೆ 1697 ಬಾಲಕರು ಹಾಗೂ 1738 ಬಾಲಕಿಯರು ಸೇರಿ ಒಟ್ಟು 3435 ಮಂದಿ ಹಾಜರಾದರು. ಭೌತಶಾಸ್ತ್ರಕ್ಕೆ 80 ಬಾಲಕರು ಹಾಗೂ 78 ಬಾಲಕಿಯರು ಸೇರಿ 158 ಮಂದಿ ಗೈರುಹಾಜ ರಾದರೆ, ರಸಾಯನ ಶಾಸ್ತ್ರಕ್ಕೆ 81 ಬಾಲಕರು ಹಾಗೂ 81 ಬಾಲಕಿಯರು ಸೇರಿ 162 ಮಂದಿ ಗೈರುಹಾಜರಾದರು.
ಉಡುಪಿಯ 5, ಕುಂದಾಪುರದ ಮೂರು ಹಾಗೂ ಕಾರ್ಕಳದ ಎರಡು ಕೇಂದ್ರಗಳು ಸೇರಿದಂತೆ ಜಿಲ್ಲೆಯ ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗಳು ರಾಜ್ಯ ಸರಕಾರದ ಕೋವಿಡ್ ಮಾರ್ಗಸೂಚಿಗಳಂತೆ ಸಾಂಗವಾಗಿ ನೆರವೇರಿದವು. ಜಿಲ್ಲೆಯಲ್ಲಿ ಪರೀಕ್ಷೆಗಳು ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅವ್ಯವಹಾರದ ಘಟನೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಜರಾದ 2 ಕೋವಿಡ್ ಬಾಧಿತರು: ಕೋವಿಡ್ ಬಾಧಿತ ಒಬ್ಬ ಬಾಲಕ ಹಾಗೂ ಬಾಲಕಿ ಇಂದು ಸಹ ಅಜ್ಜರಕಾಡಿನ ಜಿಲ್ಲಾಸ್ಪತ್ರೆ ಸಮೀಪ ವ್ಯವಸ್ಥೆ ಗೊಳಿಸಲಾದ ಕೇಂದ್ರದಲ್ಲಿ ಹಾಜರಾಗಿ ಬೆಳಗ್ಗೆ ಮತ್ತು ಅಪರಾಹ್ನ ಪರೀಕ್ಷೆ ಬರೆದರು.







