ಸಿಎಂ ನೇತೃತ್ವದ ತಜ್ಞರ ಸಮಿತಿ ಸಭೆ ಬಳಿಕ 6-8ನೇ ತರಗತಿ ಆರಂಭಕ್ಕೆ ಕ್ರಮ: ಸಚಿವ ಬಿ.ಸಿ.ನಾಗೇಶ್

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಚಿಕ್ಕಮಗಳೂರು, ಆ.29: ಮುಖ್ಯಮಂತ್ರಿ ನೇತೃತ್ವದಲ್ಲಿ ಸೋಮವಾರ ತಜ್ಞರ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ 6ರಿಂದ 8ನೇ ತರಗತಿ ಪ್ರಾರಂಭಕ್ಕೆ ಗ್ರಿನ್ಸಿಗ್ನಲ್ ಸಿಕ್ಕಲ್ಲಿ ತರಗತಿ ಗಳನ್ನು ಪ್ರಾರಂಭಿಸಲಾಗುವುದು. ಸಭೆಯಲ್ಲಿ ತಗೆದುಕೊಳ್ಳುವ ನಿರ್ಣಯಕ್ಕೆ ಶಿಕ್ಷಣ ಇಲಾಖೆ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ರವಿವಾರ ಸಂಜೆ ವೇಳೆ ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 9ರಿಂದ 12ನೇ ತಗಗತಿ ಪ್ರಾರಂಭವಾಗಿದ್ದು, ಮಕ್ಕಳು ಉತ್ಸಹದಿಂದ ಶಾಲೆಗಳಿಗೆ ಆಗಮಿಸುತ್ತಿದ್ದಾರೆ. ಅನೇಕ ಶಾಲೆಗಳಿಗೆ ಭೇಟಿ ನೀಡಿದ್ದು, ಬಹುತೇಕ ವಿದ್ಯಾರ್ಥಿಗಳ ಪೋಷಕರು ಪೂರ್ಣ ಶಾಲೆ ತೆರೆಯುವಂತೆ ಹೇಳಿದ್ದಾರೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ತಜ್ಞರ ಅಭಿಪ್ರಾಯವಿಲ್ಲದೇ ನಿರ್ಣಯ ತೆಗೆದುಕೊಳ್ಳುವ ಪ್ರಯತ್ನ ಮೊದಲು 6ರಿಂದ 8ವರೆಗೂ ನಂತರ 1ರಿಂದ 5ನೇ ತರಗತಿ ಪ್ರಾರಂಭಿಸಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಖ್ಯಮಂತ್ರಿ ಮತ್ತು ತಜ್ಞರ ಸಮಿತಿ ಅಭಿಪ್ರಾಯ ಪಡೆದು ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದ್ದು, ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ಪೂಜನೀಯ ಭಾವನೆಯಿಂದ ನೋಡಲಾಗುತ್ತದೆ. ದುರುಳರು ಹೀನಕೃತ್ಯ ಎಸಗಿದ್ದು, ಇಂತಹ ಕೃತ್ಯಗಳ ತಡೆಗೆ ಕಠಿಣ ಕಾನೂನು ಬರಬೇಕು. ಹಾಗೂ ಮೌಲ್ಯಾಧಾರಿತ ಶಿಕ್ಷಣ ಇವುಗಳನ್ನು ತಡೆಯಲು ಇರುವ ಮಾರ್ಗ ಎಂದರು.







