‘ಸರಕಾರಿ ತಾಲಿಬಾನ್’ ದೇಶವನ್ನು ವಶಪಡಿಸಿಕೊಂಡಿದೆ, ಬಿಜೆಪಿ ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ: ಟಿಕಾಯತ್

ಹೊಸದಿಲ್ಲಿ, ಆ.29: ಹರ್ಯಾಣದ ಕರ್ನಾಲ್ ನಲ್ಲಿ ಶನಿವಾರ ರೈತರ ಮೇಲೆ ಪೊಲೀಸರ ಲಾಠಿಪ್ರಹಾರಕ್ಕೆ ರವಿವಾರ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ ಟಿಕಾಯತ್ ಅವರು, ರೈತರ ತಲೆಗಳನ್ನು ಒಡೆಯುವಂತೆ ಆದೇಶಿಸುವ ಸರಕಾರಿ ತಾಲಿಬಾನ್ ಗಳು ದೇಶವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಯು ಭಾರತೀಯ ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ ಎಂದೂ ಅವರು ಕಿಡಿಕಾರಿದ್ದಾರೆ.
ಸುದ್ದಿಸಂಸ್ಥೆಯು ಹಂಚಿಕೊಂಡಿರುವ ವೀಡಿಯೊವೊಂದರಲ್ಲಿ ಟಿಕಾಯತ್, ಸರಕಾರಿ ತಾಲಿಬಾನ್ ಗಳು ದೇಶವನ್ನು ವಶಪಡಿಸಿಕೊಂಡಿದ್ದಾರೆ. ಅವರ ಕಮಾಂಡರ್ ಗಳು ಈ ದೇಶದಲ್ಲಿದ್ದಾರೆ. ಈ ಕಮಾಂಡರ್ ಗಳನ್ನು ಗುರುತಿಸಬೇಕಿದೆ. ರೈತರ ತಲೆ ಒಡೆಯಲು ಆದೇಶಿಸಿದ್ದ ವ್ಯಕ್ತಿ ಈ ಕಮಾಂಡರ್ಗಳಲ್ಲಿ ಒಬ್ಬನಾಗಿದ್ದಾನೆ ಎಂದಿದ್ದಾರೆ. ಶನಿವಾರ ವೈರಲ್ ಆಗಿದ್ದ ವೀಡಿಯೊವನ್ನು ಪ್ರಸ್ತಾಪಿಸಿ ಟಿಕಾಯತ್ ಮಾತನಾಡುತ್ತಿದ್ದರು.‘ರೈತರ ತಲೆಗಳನ್ನು ಒಡೆಯಿರಿ’ ಎಂದು ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾ ಅವರು ಈ ವೀಡಿಯೊದಲ್ಲಿ ಪೊಲೀಸರಿಗೆ ಆದೇಶಿಸಿದ್ದರು.
ಬಿಜೆಪಿಯು ರಾಷ್ಟ್ರಧ್ವಜಕ್ಕೆ ಯಾವುದೇ ಗೌರವ ನೀಡುವುದಿಲ್ಲ. ಇತ್ತೀಚಿಗೆ ಒಬ್ಬರು (ಕಲ್ಯಾಣ್ ಸಿಂಗ್) ನಿಧನರಾದಾಗ ಅವರು ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜವನ್ನು ಹೊದಿಸಿದ್ದರು. ಇದು ರಾಷ್ಟ್ರಧ್ವಜಕ್ಕೆ ಮಾಡಿರುವ ಅವಮಾನವಾಗಿದೆ. ಅವರು ರಾಷ್ಟ್ರಧ್ವಜವನ್ನೂ ಲೆಕ್ಕಿಸುವುದಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ.
ಶನಿವಾರ ಹರ್ಯಾಣ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ಪಾಲ್ಗೊಂಡಿದ್ದ ಬಿಜೆಪಿ ಸಭೆಯನ್ನು ಪ್ರತಿಭಟಿಸಲು ಕರ್ನಾಲ್ಗೆ ತೆರಳುತ್ತಿದ್ದ ರೈತರ ಮೇಲೆ ಬಸ್ತಾರಾ ಟೋಲ್ ಪ್ಲಾಝಾದ ಬಳಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಘಟನೆಯಲ್ಲಿ ಕನಿಷ್ಠ 10 ರೈತರು ಗಾಯಗೊಂಡಿದ್ದರು.
ಟ್ವೀಟ್ ಒಂದರಲ್ಲಿ ಖಟ್ಟರ್ ಅವರನ್ನು ಜಲಿಯನ್ವಾಲಾ ಬಾಗ್ ನಲ್ಲಿ ಜನರ ಹತ್ಯೆಗೆ ಆದೇಶಿಸಿದ್ದ ಬ್ರಿಟಿಷ್ ಜನರಲ್ ಡೈಯರ್ಗೆ ಹೋಲಿಸಿರುವ ಖಟ್ಟರ್,ರೈತರ ಮೇಲೆ ಹರ್ಯಾಣ ಪೊಲೀಸರ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ರೈತರು ಇವೆಲ್ಲವನ್ನು ಮರೆಯುವುದಿಲ್ಲ ’ಎಂದೂ ಹೇಳಿದ್ದಾರೆ.







