ಮಧ್ಯಪ್ರದೇಶ: ಕೋವಿಡ್ ಲಸಿಕೆ ಪಡೆದಿದ್ದ ಬಾಲಕ ಅಸ್ವಸ್ಥ, ತನಿಖೆಗೆ ಆದೇಶ
ಮೊರೆನಾ, ಆ.29: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಅಂಬಾಹ ತಾಲೂಕಿನ ಬಾಗ್ ಕಾ ಪುರದಲ್ಲಿ ಕೋವಿಡ್ ಲಸಿಕೆಯನ್ನು ಪಡೆದಿದ್ದ 16ರ ಹರೆಯದ ಬಾಲಕನೋರ್ವ ಅನಾರೋಗ್ಯಕ್ಕೆ ಗುರಿಯಾಗಿದ್ದು,ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಅಪ್ರಾಪ್ತ ವಯಸ್ಕರಿಗಾಗಿ ಕೋವಿಡ್ ಲಸಿಕೆ ಅಭಿಯಾನವನ್ನು ಸರಕಾರವು ಇನ್ನಷ್ಟೇ ಆರಂಭಿಸಬೇಕಿದೆ,ಹೀಗಿರುವಾಗ ಅಪ್ರಾಪ್ತ ವಯಸ್ಕ ಬಾಲಕನಿಗೆ ಲಸಿಕೆಯನ್ನು ನೀಡಿದ್ದು ಹೇಗೆ ಎನ್ನುವುದನ್ನು ತನಿಖೆಯು ಬಯಲಿಗೆಳೆಯಲಿದೆ ಎಂದು ಮೊರೆನಾ ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿ ಡಾ.ಎ.ಡಿ.ಶರ್ಮಾ ತಿಳಿಸಿದರು.
ಶನಿವಾರ ಲಸಿಕೆ ಕೇಂದ್ರದಲ್ಲಿ ಕಮಲೇಶ ಕುಶ್ವಾಹ ಎನ್ನುವವರ ಪುತ್ರ ಪಿಲ್ಲುಗೆ ಲಸಿಕೆಯನ್ನು ನೀಡಲಾಗಿದ್ದು,ನಂತರ ಆತನಿಗೆ ತಲೆ ಸುತ್ತತೊಡಗಿತ್ತು ಮತ್ತು ಬಾಯಿಯಲ್ಲಿ ನೊರೆ ಬರಲು ಆರಂಭವಾಗಿತ್ತು. ಅಂಬಾಹದಲ್ಲಿಯ ವೈದ್ಯರು ಆತನನ್ನು ಚಿಕಿತ್ಸೆಗೆ ಗ್ವಾಲಿಯರ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು.
‘ಪಿಲ್ಲು ಗ್ವಾಲಿಯರ್ ತಲುಪಿದ್ದಾನೆಯೇ ಎನ್ನುವುದನ್ನು ನಾವು ಪರಿಶೀಲಿಸುತ್ತಿದ್ದೇವೆ. ದೃಢಪಡದ ವರದಿಗಳಂತೆ ಆತ ಗ್ವಾಲಿಯರ್ಗೆ ಹೋಗದೇ ತನ್ನ ಮನೆಗೆ ಮರಳಿದ್ದಾನೆ. ರವಿವಾರ ಬೆಳಿಗ್ಗೆ ಅಲ್ಲಿಗೆ ತಂಡವೊಂದನ್ನು ಕಳುಹಿಸಲಾಗಿದೆ. ಪಿಲ್ಲು ಅಪಸ್ಮಾರ ರೋಗವನ್ನು ಹೊಂದಿದ್ದಾನೆಯೇ ಎನ್ನುವುದನ್ನೂ ನಾವು ಪರಿಶೀಲಿಸುತ್ತಿದ್ದೇವೆ ’ಎಂದು ಶರ್ಮಾ ತಿಳಿಸಿದರು.
ಪಿಲ್ಲುವಿನ ಆಧಾರ್ ಕಾರ್ಡ್ನಂತೆ ಆತನಿಗೆ 16 ವರ್ಷ ವಯಸ್ಸಾಗಿದ್ದು,ಆತ ಕೋಕ್ ಸಿಂಗ್ ಕಾ ಪುರ ನಿವಾಸಿಯಾಗಿದ್ದಾನೆ ಎನ್ನಲಾಗಿದೆ.







