ಪ್ಯಾರಾಲಿಂಪಿಕ್ಸ್: ಸಹ ಸ್ಪರ್ಧಿಗಳ ಆಕ್ಷೇಪ;ವಿನೋದ್ ಕುಮಾರ್ ಕಂಚಿನ ಗೆಲುವಿನ ಸಂಭ್ರಮಕ್ಕೆ ತಡೆ

photo: twitter
ಟೋಕಿಯೊ, ಆ.29: ಲೇಹ್ ನಲ್ಲಿ ಬಂಡೆಯಿಂದ ಜಾರಿಬಿದ್ದು ಕಾಲು ನೋವಿನಿಂದಾಗಿ ಸುಮಾರು 10 ವರ್ಷ ಹಾಸಿಗೆ ಹಿಡಿದಿದ್ದ ಭಾರತೀಯ ಡಿಸ್ಕಸ್ ಎಸೆತಗಾರ ವಿನೋದ್ ಕುಮಾರ್ ರವಿವಾರ ಪ್ಯಾರಾಲಿಂಪಿಕ್ಸ್ನಲ್ಲಿ ಪುರುಷರ ಎಫ್ 52 ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿ ಗಮನ ಸೆಳೆದಿದ್ದರು. ಆದರೆ ಸಹ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ವಿನೋದ್ ಕುಮಾರ್ ಅವರ ಕಂಚಿನ ಗೆಲುವಿನ ಸಂಭ್ರಮಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ.
41ರ ಹರೆಯದ ಬಿಎಸ್ಎಫ್ ಯೋಧ ವಿನೋದ್ ಕುಮಾರ್ 19.91 ಮೀ.ದೂರಕ್ಕೆ ಡಿಸ್ಕಸ್ ಎಸೆದು ಮೂರನೇ ಸ್ಥಾನ ಪಡೆದಿದ್ದರು. ಪೊಲ್ಯಾಂಡ್ನ ಕೊಸೆವಿಕ್(20.02 ಮೀ.)ಹಾಗೂ ಕ್ರೊಯೇಶಿಯದ ವೆಲಿಮಿರ್ ಸ್ಯಾಂಡರ್(19.98 ಮೀ.)ಮೊದಲ ಹಾಗೂ 2ನೆ ಸ್ಥಾನ ಪಡೆದಿದ್ದರು.
ಎಫ್-52 ವಿಭಾಗದಲ್ಲಿ ವಿನೋದ್ ಕುಮಾರ್ ಸ್ಪರ್ಧಿಸಿರುವ ಕುರಿತಾಗಿ ಕೆಲವು ಇತರ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿರುವ ಕಾರಣ ಫಲಿತಾಂಶ ತಡೆ ಹಿಡಿಯಲಾಗಿದೆ. ಸ್ಪರ್ಧೆಯ ವರ್ಗೀಕರಣದ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಕಾರಣ ಸ್ಪರ್ಧೆಯ ಫಲಿತಾಂಶವನ್ನು ಪ್ರಸ್ತುತ ಪರಿಶೀಲಿಸಲಾಗುತ್ತಿದ್ದು, ಗೆಲುವಿನ ಸಂಭ್ರಮಾಚರಣೆಯನ್ನು ಆಗಸ್ಟ್ 30ರ ಸಂಜೆಯ ತನಕ ಮುಂದೂಡಲಾಗಿದೆ ಎಂದು ಗೇಮ್ಸ್ ಆಯೋಜಕರು ತಿಳಿಸಿದ್ದಾರೆ.