ಯೆಮನ್: ಸೇನಾ ನೆಲೆಯ ಮೇಲೆ ಹೌದಿಗಳ ಕ್ಷಿಪಣಿ ದಾಳಿ
ಕನಿಷ್ಟ 30 ಯೋಧರ ಮೃತ್ಯು; 60 ಮಂದಿಗೆ ಗಾಯ
ಸನಾ, ಆ.29: ಯೆಮನ್ ನಲ್ಲಿ ಸೌದಿ ಅರೆಬಿಯಾ ನೇತೃತ್ವದ ಮಿತ್ರರಾಷ್ಟ್ರಗಳ ಪಡೆಗೆ ಸೇರಿದ ಸೇನಾನೆಲೆಯ ಮೇಲೆ ಹೌದಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಟ 30 ಯೋಧರು ಮೃತಪಟ್ಟಿದ್ದು 60 ಯೋಧರು ಗಾಯಗೊಂಡಿದ್ದಾರೆ ಎಂದು ಯೆಮನ್ ದಕ್ಷಿಣ ಸೇನಾ ವಿಭಾಗದ ವಕ್ತಾರರು ಹೇಳಿದ್ದಾರೆ.
ಸರಕಾರದ ನಿಯಂತ್ರಣದಲ್ಲಿರುವ ದಕ್ಷಿಣ ಪ್ರಾಂತ್ಯ ಲಾಹಿಜ್ ನ ಅಲ್-ಅನಾದ್ ಸೇನಾನೆಲೆಯ ಮೇಲೆ ಸಶಸ್ತ್ರ ಡ್ರೋನ್ ಗಳನ್ನು ಬಳಸಿ ಹಾಗೂ ಪ್ರಕ್ಷೇಪಕ ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ. ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಕ್ತಾರ ಮುಹಮ್ಮದ್ ಅಲ್ ನಖೀಬ್ ಹೇಳಿದ್ದಾರೆ. ಕ್ಷಿಪಣಿ ದಾಳಿ ಹಾಗೂ ಸ್ಫೋಟದ ಬಳಿಕ ವಾಯುನೆಲೆಯಲ್ಲಿ ಗೊಂದಲ, ಆತಂಕ ನೆಲೆಸಿದ್ದು ಮತ್ತಷ್ಟು ದಾಳಿಯ ಭೀತಿಯಿಂದ ಯೋಧರು ಗಾಯಗೊಂಡಿದ್ದ ಸಹೋದ್ಯೋಗಿಗಳನ್ನು ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ದೌಡಾಯಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಹೌದಿ ಬಂಡುಕೋರರ ನಿಯಂತ್ರಣದಲ್ಲಿರುವ ತಯೀಝ್ ನಗರದ ಹೊರವಲಯದಿಂದ ಕ್ಷಿಪಣಿಗಳನ್ನು ಹಾರಿಬಿಡಲಾಗಿದೆ. ಅಲ್-ಅನಾದ್ ಸೇನಾ ನೆಲೆಯಲ್ಲಿ ಹಲವು ಸ್ಫೋಟಗಳ ಸದ್ದು ಬಹುದೂರದವರೆಗೂ ಕೇಳಿಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಎಡೆನ್ ನಗರದ 60 ಕಿ.ಮೀ ದೂರದಲ್ಲಿರುವ ಅಲ್-ಅನಾದ್ ಸೇನಾನೆಲೆಯನ್ನು 2014ರವರೆಗೆ ಅಲ್ಖೈದಾ ವಿರುದ್ಧದ ಕಾರ್ಯಾಚರಣೆಗೆ ಅಮೆರಿಕ ಬಳಸಿಕೊಂಡಿತ್ತು. ಬಳಿಕ ಇದನ್ನು ಹೌದಿಗಳು ಕೈವಶ ಮಾಡಿಕೊಂಡಿದ್ದವು. ಆದರೆ ಆಗಸ್ಟ್ 2015ರಲ್ಲಿ ಮಿತ್ರರಾಷ್ಟ್ರಗಳ ಸೇನೆಯ ನೆರವಿನೊಂದಿಗೆ ಯೆಮನ್ ಸರಕಾರಿ ಪಡೆ ಇದನ್ನು ವಶಕ್ಕೆ ಪಡೆದಿದೆ.
ಯೆಮನ್ನಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದಿರುವ ಸರಕಾರಕ್ಕೆ ಸೌದಿ ನೇತೃತ್ವದ ಮಿತ್ರರಾಷ್ಟ್ರಗಳ ಸೇನೆಯ ನೆರವಿದ್ದರೆ, ಇರಾನ್ ಬೆಂಬಲವಿರುವ ಹೌದಿ ಬಂಡುಕೋರರು 2014ರಿಂದಲೂ ಸರಕಾರದೊಂದಿಗೆ ಸಂಘರ್ಷದಲ್ಲಿ ನಿರತರಾಗಿದ್ದಾರೆ. 2015ರ ಮಾರ್ಚ್ನಲ್ಲಿ ಮನ್ಸೂರ್ ಹದಿಯವರ ಸರಕಾರದ ಮರುಸ್ಥಾಪನೆಗಾಗಿ ಸೌದಿ ಮತ್ತು ಯುಎಇ ನೇತೃತ್ವದ ಮಿತ್ರರಾಷ್ಟ್ರಗಳು ಮಧ್ಯಪ್ರವೇಶಿಸಿದರೂ, ಬಳಿಕ ಸರಕಾರದ ವಿರುದ್ಧದ ಹೌದಿ ಬಂಡುಕೋರರ ಸಂಘರ್ಷ ಮುಂದುವರಿದಿದೆ.
ಈ ಅಂತರ್ಯುದ್ಧದಲ್ಲಿ ಸಾವಿರಾರು ಮಂದಿ ಮೃತರಾಗಿದ್ದು ವಿಶ್ವದ ಅತೀ ದೊಡ್ಡ ಮಾನವೀಯ ಬಿಕ್ಕಟ್ಟು ಎನಿಸಿಕೊಂಡಿದೆ. ಈ ಮಧ್ಯೆ, ಸೌದಿ ನೇತೃತ್ವದ ಮಿತ್ರಪಡೆ ಹಾಗೂ ಹೌದಿಗಳ ಮಧ್ಯೆ ವಿಶ್ವಸಂಸ್ಥೆ ಮತ್ತು ಅಮೆರಿಕ ಬೆಂಬಲದಿಂದ ನಡೆಯುತ್ತಿದ್ದ ಶಾಂತಿ ಮಾತುಕತೆ ಯಾವುದೇ ಪ್ರಗತಿ ಕಾಣದೆ ವಿಫಲವಾಗಿದೆ ಎಂದು ಮೂಲಗಳು ಹೇಳಿವೆ.







