ಮೆಕ್ಸಿಕೋದಲ್ಲಿ ವಲಸಿಗರ ಪ್ರತಿಭಟನೆ
ಮೆಕ್ಸಿಕೊ ಸಿಟಿ, ಆ.29: ಮೆಕ್ಸಿಕೋದ ದಕ್ಷಿಣ ಪ್ರಾಂತ್ಯದ ನಗರ ತಪಚುಲದಿಂದ ತಮ್ಮನ್ನು ದೇಶದ ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಮತ್ತು ಆಶ್ರಯ ಒದಗಿಸುವ ಪ್ರಕ್ರಿಯೆಯಲ್ಲಿನ ನಿಧಾನಗತಿಯನ್ನು ವಿರೋಧಿಸಿ ಮಧ್ಯ ಅಮೆರಿಕ ಹಾಗೂ ಕ್ಯಾರಿಬಿಯನ್ ದೇಶಗಳ ನೂರಾರು ವಲಸಿಗರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮೆಕ್ಸಿಕೋದಲ್ಲಿ ಆಶ್ರಯ ಕೋರಿ ಬಂದಿರುವ ಹೈಟಿ, ಕ್ಯೂಬಾ, ಮಧ್ಯ ಅಮೆರಿಕ, ಕೊಲಂಬಿಯಾದಿಂದ ಬಂದಿರುವ, ಮಕ್ಕಳು ಮಹಿಳೆಯರ ಸಹಿತ ಸುಮಾರು 500 ವಲಸಿಗರು ತಪಚುಲದಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ರಾಯ್ಟರ್ಸ್ ಸುದ್ಧಿಸಂಸ್ಥೆ ವರದಿ ಮಾಡಿದೆ. ಕಳೆದ 3 ತಿಂಗಳಿಂದ ನಮ್ಮನ್ನು ತಪಚುಲದಲ್ಲಿ ಇರಿಸಲಾಗಿದೆ. ನಾವಿಲ್ಲಿ ಬದುಕಿರಲು ಸಾಧ್ಯವಿಲ್ಲ. ನಮ್ಮನ್ನು ಮೆಕ್ಸಿಕೋದ ಇತರ ಭಾಗಗಳಿಗೆ ಸ್ಥಳಾಂತರಿಸಿ ಅಥವಾ ಅಮೆರಿಕದ ಗಡಿಭಾಗ ತಲುಪಲು ಮಾನವೀಯ ನೆಲೆಯಲ್ಲಿ ಅವಕಾಶ ಮಾಡಿಕೊಡಿ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೊಲಂಬಿಯಾದ ಪ್ರಜೆ ಕಾರ್ಲೋಸ್ ಕೊರಿಯಾ ಹೇಳಿದ್ದಾರೆ.
ಮೆಕ್ಸಿಕೋದ ಕಾನೂನಿನ ಪ್ರಕಾರ, ನಿರಾಶ್ರಿತರು ಆಶ್ರಯ ಕೋರಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳುವವರೆಗೆ ಅವರು ಅರ್ಜಿ ಸಲ್ಲಿಸಿದ ರಾಜ್ಯದಲ್ಲಿಯೇ ಇರಬೇಕು. ಈ ಪ್ರಕ್ರಿಯೆ ಕೆಲವೊಮ್ಮೆ ವರ್ಷದವರೆಗೆ ಮುಂದುವರಿಯಬಹುದು.





