ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮಾಚರಣೆಯ ಮುಂಬರುವ ಪೋಸ್ಟರ್ ನಲ್ಲಿ ನೆಹರು ಚಿತ್ರ ಇರುತ್ತದೆ: ಐಸಿಎಚ್ ಆರ್

ಹೊಸದಿಲ್ಲಿ: ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮಾಚರಣೆಯ ಮೊದಲ ಪೋಸ್ಟರ್‌ನಿಂದ ಜವಾಹರಲಾಲ್ ನೆಹರು ಅವರ ಚಿತ್ರವನ್ನು ಕೈಬಿಟ್ಟಿರುವುದಕ್ಕೆ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ. ಇದರಿಂದ ಎಚ್ಚೆತ್ತ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ಐಸಿಎಚ್‌ಆರ್) ಈ ವಿವಾದವು ಅನಗತ್ಯ ಎಂದು ಹೇಳಿದೆ. ಮುಂಬರುವ ಪೋಸ್ಟರ್ ಗಳಲ್ಲಿ ನೆಹರೂ ಫೋಟೊ ಇರಲಿದೆ ಎಂದು ಸ್ಪಷ್ಟಪಡಿಸಿದೆ.
"ನಾವು ಚಳವಳಿಯಲ್ಲಿ ಯಾರ ಪಾತ್ರವನ್ನು ಹಾಳುಗೆಡವಲು ಪ್ರಯತ್ನಿಸುತ್ತಿಲ್ಲ" ಎಂದಿರುವ ಐಸಿಎಚ್‌ಆರ್‌ನ ಉನ್ನತ ಅಧಿಕಾರಿಯೊಬ್ಬರು ಈ ವಿಷಯದ ಕುರಿತ ಟೀಕೆಗಳನ್ನು ತಳ್ಳಿಹಾಕಿದರು. ಆಝಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ ಬಿಡುಗಡೆಯಾದ ಪೋಸ್ಟರ್‌ಗಳಲ್ಲಿ ಅದೂ ಒಂದಾಗಿದೆ ಎಂದರು.
ಆದಾಗ್ಯೂ, ಕಾಂಗ್ರೆಸ್ ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸಿತು ಮತ್ತು ಅವರು ತಮ್ಮ ಪೂರ್ವಾಗ್ರಹಗಳನ್ನು ಮೀರಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿತು.
ಐಸಿಎಚ್‌ಆರ್, ಶಿಕ್ಷಣ ಸಚಿವಾಲಯದ ಅಡಿಯಲ್ಲಿರುವ ಸ್ವಾಯತ್ತ ಸಂಸ್ಥೆ, "ಆಝಾದಿ ಕಾ ಅಮೃತ್ ಮಹೋತ್ಸವ" ಆಚರಣೆಯ ಅಡಿಯಲ್ಲಿ ಸ್ವಾತಂತ್ರ್ಯ ಹೋರಾಟದ ವಿಷಯದ ಕುರಿತು ಸರಣಿ ಉಪನ್ಯಾಸಗಳು ಮತ್ತು ವಿಚಾರಗೋಷ್ಠಿಗಳನ್ನು ನಡೆಸುತ್ತಿದೆ.
"ಇದು ಆಝಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ ಬಿಡುಗಡೆಯಾದ ಪೋಸ್ಟರ್‌ಗಳಲ್ಲಿ ಒಂದಾಗಿದೆ. ಇನ್ನೂ ಅನೇಕರು ಇರುತ್ತಾರೆ ಹಾಗೂ ಅವರಲ್ಲಿ ನೆಹರು ಕಾಣಿಸಿಕೊಳ್ಳುತ್ತಾರೆ ... ಇದರ ಸುತ್ತ ವಿವಾದ ಅನಗತ್ಯ" ಎಂದು ಐಸಿಎಚ್‌ಆರ್ ಅಧಿಕಾರಿ ಹೇಳಿದರು.
"ಇದು ಅಚಾತುರ್ಯವಾಗಿರಬಹುದು. ನಾವು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುವಾಗ ನೆಹರೂರಂತಹ ವ್ಯಕ್ತಿಯನ್ನು ಯಾರೂ ಬಿಟ್ಟುಬಿಡಲು ಸಾಧ್ಯವಿಲ್ಲ. ಇದು ನಿರ್ಲಕ್ಷ್ಯದಿಂದ ಆಗಿರಬಹುದು. ಆದರೆ ಖಂಡಿತವಾಗಿಯೂ ಉದ್ದೇಶಪೂರ್ವಕವಾಗಿಲ್ಲ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶಗಳು ಕಾಣಬಾರದು ಹೇಳಿದರು.







