ಅಮೆರಿಕದ ಡ್ರೋನ್ ದಾಳಿಗೆ ಅಫ್ಘಾನ್ ನಲ್ಲಿ ಮಕ್ಕಳು ಸೇರಿ ಹಲವರು ಬಲಿ: ವರದಿ

ಫೋಟೋ : PTI
ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ಮೇಲೆ ಅಮೆರಿಕ ಸೇನಾಪಡೆಗಳು ನಡೆಸಿದ ಡ್ರೋನ್ ದಾಳಿಯಲ್ಲಿ ಹಲವು ಮಕ್ಕಳು ಸೇರಿದಂತೆ ಭಾರಿ ಸಂಖ್ಯೆಯ ಅಫ್ಘಾನ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದರ ಜತೆಗೆ ದೇಶದ ರಾಜಧಾನಿಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಸಜ್ಜಾಗುತ್ತಿದ್ದ ಶಂಕಿತ ಆತ್ಮಾಹುತಿ ದಾಳಿಕೋರ ಕೂಡಾ ಬಲಿಯಾಗಿದ್ದಾನೆ ಎಂದು ವರದಿಗಳು ಹೇಳಿವೆ.
ಕಾಬೂಲಿನ ವಸತಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಒಂದು ವಾಹನವನ್ನು ಗುರಿ ಮಾಡಿದ್ದ ದಾಳಿಯಲ್ಲಿ ಒಂದೇ ಕುಟುಂಬದ ಆರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ನಾಗರಿಕರು ಮತ್ತು ಸ್ಥಳೀಯ ಪತ್ರಕರ್ತರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಘಟನೆಯಲ್ಲಿ ಜೀವ ಕಳೆದುಕೊಂಡವರಲ್ಲಿ ಎರಡು ವರ್ಷದ ಹೆಣ್ಣು ಮಗು ಕೂಡಾ ಸೇರಿದೆ ಎಂದು ಸಿಎನ್ಎನ್ ತಿಳಿಸಿದೆ.
"ಸುತ್ತಮುತ್ತಲ ಎಲ್ಲರೂ ನೆರವಿಗೆ ಧಾವಿಸಿದರು; ನೀರು ತಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಐದಾರು ಮಂದಿ ಮೃತಪಟ್ಟಿದ್ದನ್ನು ನಾನು ನೋಡಿದ್ದೇನೆ. ಒಂದು ಕುಟುಂಬದಲ್ಲಿ ತಂದೆ, ಬಾಲಕ ಮತ್ತು ಇತರ ಇಬ್ಬರು ಮಕ್ಕಳು ಮೃತಪಟ್ಟರು. ಅವರ ದೇಹ ಚೂರುಚೂರಾಗಿ ಬಿದ್ದಿತ್ತು. ಇತರ ಇಬ್ಬರು ಗಾಯಗೊಂಡಿದ್ದಾರೆ" ಎಂದು ಸ್ಥಳೀಯ ನಿವಾಸಿ ಅಹದ್ ಹೇಳಿದ್ದಾಗಿ ಸಿಎನ್ಎನ್ ವರದಿ ಮಾಡಿದೆ.
ರವಿವಾರ ನಡೆದ ಡ್ರೋನ್ ದಾಳಿಯಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದಾಗಿ ಅಫ್ಘಾನ್ ಅಧಿಕಾರಿಗಳು ಹೇಳಿಕೆ ನೀಡಿದ್ದನ್ನು ಅಸೋಸಿಯೇಟೆಡ್ ಪ್ರೆಸ್ ವರದಿ ವಿವರಿಸಿದೆ.
ಸಿಎನ್ಎನ್ ವರದಿ ಬಳಿಕ ಅಮೆರಿಕ ಅಧಿಕೃತ ಹೇಳಿಕೆ ನೀಡಿ, ಈ ವಾಯುದಾಳಿಯಲ್ಲಿ ನಾಗರಿಕರು ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಮಾಯಕ ಜೀವಗಳು ಬಲಿಯಾಗಿದ್ದರೆ ತೀವ್ರ ಬೇಸರದ ಸಂಗತಿ ಎಂದು ಸ್ಪಷ್ಟಪಡಿಸಿದೆ.







