ಪ್ಯಾರಾಲಿಂಪಿಕ್ಸ್: ಜಾವೆಲಿನ್ ದಂತಕತೆ ದೇವೇಂದ್ರ, ಡಿಸ್ಕಸ್ ಎಸೆತಗಾರ ಯೋಗೇಶರಿಗೆ ಬೆಳ್ಳಿ

ಸುಂದರ್ ಸಿಂಗ್ ಗುರ್ಜರ್(ಕಂಚು) ಹಾಗೂ ದೇವೇಂದ್ರ ಜಜಾರಿಯಾ(ಬೆಳ್ಳಿ), photo: Times of india
ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೋಮವಾರ ಜಾವೆಲಿನ್ ದಂತಕತೆ ದೇವೇಂದ್ರ ಜಜಾರಿಯಾ ಅವರು ಎಫ್ 46 ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸಿದರು.
ಎರಡು ಬಾರಿ ಚಿನ್ನದ ಪದಕ ವಿಜೇತೆ ಹಿರಿಯ ಜಾವೆಲಿನ್ ಎಸೆತಗಾರ ದೇವೇಂದ್ರ ಪ್ಯಾರಾಲಿಂಪಿಕ್ಸ್ ನಲ್ಲಿ ಮೂರನೇ ಪದಕ ಜಯಿಸಿದರು. ಸುಂದರ್ ಸಿಂಗ್ ಗುರ್ಜರ್ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಜಯಿಸಿದರು.
40ರ ಹರೆಯದ ಜಜಾರಿಯಾ ಈಗಾಗಲೇ 2004 ಹಾಗೂ 2016ರ ಪ್ಯಾರಾಲಿಂಪಿಕ್ಸ್ ನಲ್ಲಿ ಚಾಂಪಿಯನ್ ಆಗುವುದರೊಂದಿಗೆ ಭಾರತದ ಶ್ರೇಷ್ಠ ಒಲಿಂಪಿಯನ್ ಆಗಿ ಗುರುತಿಸಿಕೊಂಡಿದ್ದಾರೆ. ಸೋಮವಾರ 64.35 ಮೀ.ದೂರಕ್ಕೆ ಜಾವೆಲಿನ್ ಎಸೆದು ಹೊಸ ವೈಯಕ್ತಿಕ ಸಾಧನೆಯೊಂದಿಗೆ ಬೆಳ್ಳಿ ಜಯಿಸಿದರು. ಶ್ರೀಲಂಕಾದ ದಿನೇಶ್ ಪ್ರಿಯನ್(67.79 ಮೀ.) ಹೊಸ ವಿಶ್ವ ದಾಖಲೆ ನಿರ್ಮಿಸಿ ಚಿನ್ನ ಜಯಿಸಿದರು.
25ರ ಹರೆಯದ ಜೈಪುರ ಮೂಲದ ಗುರ್ಜರ್ ಅವರು 64.01 ಮೀ.ದೂರಕ್ಕೆ ಜಾವೆಲಿನ್ ಎಸೆದು 3ನೇ ಸ್ಥಾನ ಪಡೆದರು.
ಪುರುಷರ ಎಫ್ 56 ಡಿಸ್ಕಸ್ ಎಸೆತದಲ್ಲಿ ಯೋಗೇಶ್ ಕಥುನಿಯಾ ಬೆಳ್ಳಿ ಪದಕ ಜಯಿಸಿದರು.
24ರ ಹರೆಯದ ಹೊಸದಿಲ್ಲಿಯ ಕಿರೊರಿಮಲ್ ಕಾಲೇಜಿನ ಬಿಕಾಂ ಪದವೀಧರ ಯೋಗೇಶ್ ತನ್ನ ಆರನೇ ಹಾಗೂ ಕೊನೆಯ ಪ್ರಯತ್ನದಲ್ಲಿ 44.38 ಮೀ.ದೂರಕ್ಕೆ ಡಿಸ್ಕಸ್ ಎಸೆದು ಬೆಳ್ಳಿ ಪದಕ ಜಯಿಸಿದರು.