ಕನ್ನಡಿಗ ಸ್ಟುವರ್ಟ್ ಬಿನ್ನಿ ಪ್ರಥಮ ದರ್ಜೆ, ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ

ಹೊಸದಿಲ್ಲಿ: ಏಕದಿನ ಕ್ರಿಕೆಟ್ ನಲ್ಲಿ ಶ್ರೇಷ್ಠ ಬೌಲಿಂಗ್ ದಾಖಲೆ ಹೊಂದಿರುವ ಬೌಲರ್ ಎನಿಸಿಕೊಂಡಿರುವ ಭಾರತದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಪ್ರಥಮ ದರ್ಜೆ ಹಾಗೂ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ಸೋಮವಾರ ನಿವೃತ್ತಿ ಘೋಷಿಸಿದರು.
37ರ ಹರೆಯದ ಬಿನ್ನಿ ತನ್ನ ರಾಜ್ಯ ಕರ್ನಾಟಕದ ಪರ ಆಡುವ ಮೂಲಕ ತನ್ನ ವೃತ್ತಿಜೀವನ ಆರಂಭಿಸಿದರು. ಭಾರತವನ್ನು 6 ಟೆಸ್ಟ್, 14 ಏಕದಿನ ಹಾಗೂ 3 ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.
ಭಾರತದ ಮಾಜಿ ಖ್ಯಾತ ಕ್ರಿಕೆಟಿಗ ರೋಜರ್ ಬಿನ್ನಿ ಅವರ ಪುತ್ರರಾಗಿರುವ ಸ್ಟುವರ್ಟ್ 1984ರ ಜೂನ್ 3ರಂದು ಬೆಂಗಳೂರಿನಲ್ಲಿ ಜನಿಸಿದರು.
ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೆಚ್ಚು ರನ್ ಗಳಿಸದ ಬಿನ್ನಿ 2014ರಲ್ಲಿ ಢಾಕಾದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಕೇವಲ 4 ರನ್ ನೀಡಿ 6 ವಿಕೆಟ್ ಗಳನ್ನು ಉರುಳಿಸಿದ್ದರು. ಈ ಮೂಲಕ ಅತ್ಯಮೋಘ ಬೌಲಿಂಗ್ ಮಾಡಿದ್ದರು. ಬಿನ್ನಿ ಏಕದಿನ ಕ್ರಿಕೆಟ್ ನಲ್ಲಿ ಶ್ರೇಷ್ಠ ಬೌಲರ್ ಆಗಿ ಗುರುತಿಸಿಕೊಂಡಿದ್ದರು.
4 ರನ್ ನೀಡಿ 6 ವಿಕೆಟ್ ಪಡೆದಿದ್ದ ಬಿನ್ನಿ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದಿದ್ದರು. ಕುಂಬ್ಳೆ 1993ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯದಲ್ಲಿ 6 ವಿಕೆಟ್ ಪಡೆದಿದ್ದರೂ 12 ರನ್ ನೀಡಿದ್ದರು.
ಉತ್ತಮ ಆಲ್ ರೌಂಡರ್ ಬಿನ್ನಿ 95 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.







