ಪ್ಯಾರಾಲಿಂಪಿಕ್ಸ್:ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ ಜಾವೆಲಿನ್ ಎಸೆತಗಾರ ಸುಮಿತ್ ಅಂಟಿಲ್

photo: twitter
ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಪುರುಷರ ಜಾವೆಲಿನ್ ಎಸೆತ-ಎಫ್ 64 ವಿಭಾಗದ ಫೈನಲ್ ನಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸಿ ಅತ್ಯಮೋಘ ಪ್ರದರ್ಶನ ನೀಡಿದ ಭಾರತದ ಜಾವೆಲಿನ್ ಎಸೆತಗಾರ ಸುಮಿತ್ ಅಂಟಿಲ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.
ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಸುಮಿತ್ ಅಂಟಿಲ್ ಒಂದಲ್ಲ, ಎರಡಲ್ಲ, ಮೂರು ಬಾರಿ ವಿಶ್ವ ದಾಖಲೆಯನ್ನು ಮುರಿದರು. ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸುವ ಮೊದಲ ಪ್ರಯತ್ನದಲ್ಲಿ ಅವರು 66.95 ದೂರಕ್ಕೆ ಜಾವೆಲಿನ್ ಎಸೆದರು. ನಂತರ ಅವರ ಐದನೇ ಪ್ರಯತ್ನದಲ್ಲಿ, ಅವರು 68.55 ಮೀಟರ್ ಎಸೆತದೊಂದಿಗೆ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. ಭಾರತದ ಸಹ ಆಟಗಾರ ಸಂದೀಪ್ ಚೌಧರಿ 62.20 ಮೀ. ಅತ್ಯುತ್ತಮ ಎಸೆತದೊಂದಿಗೆ ನಾಲ್ಕನೇ ಸ್ಥಾನ ಪಡೆದರು.
ಸುಮಿತ್ ಸಾಧನೆಯೊಂದಿಗೆ ಭಾರತವು ಸೋಮವಾರ ಎರಡನೇ ಚಿನ್ನದ ಪದಕ ಗೆದ್ದುಕೊಂಡಿದೆ.
ಸೋಮವಾರ ನಡೆದ ಫೈನಲ್ ನಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ 66.95 ಮೀ. ದೂರಕ್ಕೆ ಜಾವೆಲಿನ್ ಎಸೆದಿರುವ ಸುಮಿತ್ ತನ್ನ ಎರಡನೇ ಪ್ರಯತ್ನದಲ್ಲಿ 68.08 ಮೀ.ದೂರಕ್ಕೆ ಜಾವೆಲಿನ್ ಎಸೆದರು. 3ನೇ ಪ್ರಯತ್ನದಲ್ಲಿ 65.27 ಮೀ., 4ನೇ ಪ್ರಯತ್ನದಲ್ಲಿ 66.71 ಮೀ ಹಾಗೂ 5ನೇ ಪ್ರಯತ್ನದಲ್ಲಿ 68.55 ಮೀ.ದೂರಕ್ಕೆ ಜಾವೆಲಿನ್ ಎಸೆದರು. ಐದನೇ ಪ್ರಯತ್ನದಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಸುಮಿತ್ ಚಿನ್ನ ತನ್ನದಾಗಿಸಿಕೊಂಡರು.