ಶಿವಸೇನಾ ಸಂಸದೆ ಭಾವನಾಗೆ ಸಂಬಂಧಿಸಿದ 9 ಸ್ಥಳಗಳಲ್ಲಿ ಈಡಿ ದಾಳಿ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಶಿವಸೇನೆಯ ಸಂಸದೆ ಭಾವನಾ ಗವಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ 9 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ(ಈಡಿ)ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.
ಗವಳಿಗೆ ಸಂಬಂಧಿಸಿದ ಟ್ರಸ್ಟ್ ವೊಂದು 17 ಕೋಟಿ.ರೂ. ಅವ್ಯವಹಾರ ನಡೆಸಿದ್ದನ್ನು ಕೇಂದ್ರ ಏಜೆನ್ಸಿ ಪತ್ತೆ ಹಚ್ಚಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಗವಳಿಗೆ ಸಂಬಂಧಿಸಿದ 7 ಸ್ಥಳಗಳಲ್ಲಿ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳಡಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಗವಳಿಗೆ ಸಂಬಂಧಿಸಿದ ವಾಶೀಮ್, ಮುಂಬೈ ಹಾಗೂ ಇತರ ನೆರೆ ಸ್ಥಳಗಳಲ್ಲಿರುವ ಆಸ್ತಿ-ಪಾಸ್ತಿಗಳಲ್ಲಿ ಶೋಧ ನಡೆಯುತ್ತಿದೆ.
ಮಹಿಳಾ ಉತ್ಕರ್ಷ ಪ್ರತಿಷ್ಠಾನ, ಬಾಲಾಜಿ ಸಹಕಾರಿ ಪಾರ್ಟಿಕಲ್ ಬೋರ್ಡ್, ಬಿಎಎಂಎಸ್ ಕಾಲೇಜ್, ಭಾವನಾ ಆಗ್ರೋ ಪ್ರಾಡಕ್ಟ್ ಸರ್ವಿಸಸ್ ಲಿಮಿಟೆಡ್ ಸೇರಿದಂತೆ ವಾಶೀಮ್ ಜಿಲ್ಲೆಯ 9 ಸ್ಥಳಗಳಲ್ಲಿ ದಾಳಿ ನಡೆದಿದೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.
ಶಿವಸೇನೆಯ ಸಂಸದೆಯಾಗಿರುವ ಭಾವನಾ ಪುಂಡಳೀಕರಾವ್ ಗವಳಿ ಅವರು ಮಹಾರಾಷ್ಟ್ರದ ಯವತ್ಮಾಳ್-ವಾಶೀಮ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.





