ಬೆಂಗಳೂರು: ಕಳ್ಳತನಕ್ಕೆ ವಿಮಾನದಲ್ಲಿ ಬರುತ್ತಿದ್ದ ಮೂವರು ಆರೋಪಿಗಳ ಬಂಧನ; 1.80 ಕೋಟಿ ರೂ.ಮೌಲ್ಯದ ಸೊತ್ತುಗಳ ವಶ

ಬೆಂಗಳೂರು, ಆ.30: ಕಳವು ಪ್ರಕರಣ ಸಂಬಂಧ ಮೂವರನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು 1.80 ಕೋಟಿಗೂ ಅಧಿಕ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಬಿಲಾಲ್ ಮಂಡಲ್(33), ಮಹಾರಾಷ್ಟ್ರದ ಸಲೀಂ(43), ಬಿಹಾರದ ಝಾಲಿಖ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಆರೋಪಿಗಳು ತಮ್ಮ ಸ್ವಂತ ಊರುಗಳಲ್ಲಿ ಬೆಂಗಳೂರಿನಲ್ಲಿ ವ್ಯವಹಾರ ಮಾಡುತ್ತಿರುವುದಾಗಿ ಬಿಂಬಿಸಿಕೊಂಡು ಕಳೆದ ಮೂರು ವರ್ಷಗಳಿಂದ ನಗರಕ್ಕೆ ಬಂದು ಮನೆಗಳವು ಮಾಡುತ್ತಿದ್ದರು. ಬೀಗ ಹಾಕಿದ ಮನೆಗಳನ್ನು ಗುರುತಿಸಿ ಸಂಚು ರೂಪಿಸಿ ಕಳವು ಮಾಡುವಲ್ಲಿ ಚಾಣಾಕ್ಷರಾಗಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಹೇಳಿದರು.
ಸುಮಾರು 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳ ಬೆರಳು ಮುದ್ರೆ ದೊರೆತಿದ್ದು, ಅದನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಬಸವನಗುಡಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಕಳ್ಳತನ ಮಾಡುವ ಉದ್ದೇಶಕ್ಕಾಗಿಯೇ ನಗರಕ್ಕೆ ವಿಮಾನದಲ್ಲಿ ಬರುತ್ತಿದ್ದು, ನಗರದ ವಿವಿಧೆಡೆ ಬಾಡಿಗೆ ಮನೆ ಮಾಡಿಕೊಂಡು ಬೀಗ ಹಾಕಿದ ಮನೆಗಳನ್ನು ಗುರುತಿಸಿ ನಂತರ ಸಂಚು ರೂಪಿಸಿ ಚಾಣಾಕ್ಷ ರೀತಿಯಲ್ಲಿ ಕಳವು ಮಾಡುತ್ತಿದ್ದರು.
ಕಳವು ಮಾಡಿದ ಚಿನ್ನ-ಬೆಳ್ಳಿ ಸಾಮಾನುಗಳನ್ನು ಮುಂಬೈ, ಹೈದರಾಬಾದ್‍ನ ವಿವಿಧ ಜ್ಯೂವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿ ಹಣವನ್ನು ಹಂಚಿಕೊಳ್ಳುತ್ತಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಆರೋಪಿಗಳಿಂದ 3 ಕೆ.ಜಿ. 286 ಗ್ರಾಂ ಚಿನ್ನ, 18 ಕೆ.ಜಿ. ಬೆಳ್ಳಿ, 46700 ರೂ. ನಗದು, 24 ವಿವಿಧ ಕಂಪೆನಿಯ ವಾಚ್‍ಗಳು, ಲ್ಯಾಪ್‍ಟಾಪ್ ಸೇರಿ 1,80,45,700 ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.







