ವಿಶ್ವಕರ್ಮ ಸಮಾಜಕ್ಕೆ ಮಂತ್ರಿ ಸ್ಥಾನ ನೀಡದಿದ್ದರೆ ಹೋರಾಟ: ವಿಶ್ವಕರ್ಮ ಮಹಾಸಭಾ ಎಚ್ಚರಿಕೆ
ಉಡುಪಿ, ಆ.30: ರಾಜ್ಯದಲ್ಲಿ ವಿಶ್ವಕರ್ಮ ಸಮಾಜವನ್ನು ಬಲಿಷ್ಠವಾಗಿ ಕಟ್ಟಿ, ಸಮಾಜ ನಾಯಕರಾದ, ಹಿಂದುಳಿದ ವರ್ಗಗಳ ನಾಯಕರೂ ಆದ ಕೆ.ಪಿ. ನಂಜುಂಡಿ ಅವರಿಗೆ ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ವಿಶ್ವಕರ್ಮ ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ವಿಶ್ವಕರ್ಮಾ ಮಹಾಸಭಾದ ಉಡುಪಿ ಜಿಲ್ಲಾ ಅಧ್ಯಕ್ಷರಾದ ನೇರಂಬಳ್ಳಿ ರಮೇಶ್ ಆಚಾರ್ಯ, ರಾಜ್ಯದ ಬಿಜೆಪಿ ಸರಕಾರದ ಮೇಲೆ ಭರವಸೆ ಇರಿಸಿಕೊಂಡಿದ್ದೆವು. ಆದರೆ ಈ ಪಕ್ಷವೂ ನಮಗೆ ಯಾವುದೇ ವ್ಯವಸ್ಥೆ ಮಾಡಿ ಕೊಡುತ್ತಿಲ್ಲ. ಇನ್ನಾದರೂ ಶೀಘ್ರದಲ್ಲಿ ನಮಗೆ ನ್ಯಾಯ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇವೆ ಎಂದರು.
ನಮ್ಮ ನಾಯಕರಾದ ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರು ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಿ ಆಗಿರುವ ಅನ್ಯಾಯದ ಕುರಿತಂತೆ ಸಮಾಜದ ಮಂದಿಗೆ ಮನವರಿಕೆ ಮಾಡಿ ಸಮಾಜದ ಸಂಘಟನೆ ಯನ್ನು ಬಲಿಷ್ಠಗೊಳಿಸಲಿದ್ದಾರೆ ಎಂದರು.
ಬಿಜೆಪಿ ಪಕ್ಷವನ್ನು ನಂಬಿ ಬೆಂಬಲಿಸಿದ ವಿಶ್ವಕರ್ಮರಿಗೆ ಬಿಜೆಪಿಯಿಂದಲೇ ಅನ್ಯಾಯವಾಗುತ್ತಿದೆ. ನಮ್ಮ ವಿಶ್ವಕರ್ಮ ಸಮಾಜದ ಉನ್ನತಿಗಾಗಿ ದುಡಿಯುತ್ತಿ ರುವ ನಾಯಕ ಕೆ.ಪಿ.ನಂಜುಂಡಿ ಅವರಿಗೆ ಶಕ್ತಿ ಕೊಡಿ. ವಿಶ್ವಕರ್ಮ ಸಮಾಜ ವನ್ನು ಸಂಕಷ್ಟದಿಂದ ಪಾರು ಮಾಡಿ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇವೆ. ಇಲ್ಲದಿದ್ದರೆ ಕೇಂದ್ರದ ನಾಯಕರನ್ನು ಭೇಟಿ ಮಾಡಿ ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ವಿವರಿಸಿ ನ್ಯಾಯ ಕೇಳುತ್ತೇವೆ. ಹೋರಾಟ ಮಾಡುತ್ತೇವೆ ಎಂದು ಸಮುದಾಯದ ಮುಖಂಡರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಯುವ ಘಟಕದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ ಕೋಟ, ನಾರಾಯಣ ಆಚಾರ್ಯ ಬೈಂದೂರು, ಗಂಗಾಧರ ಆಚಾರ್ಯ ಬಾರ್ಕೂರು, ರಾಜೇಶ್ ಆಚಾರ್ಯ ಬೈಂದೂರು ಹಾಗೂ ಸುಶಾಂತ್ ಆಚಾರ್ಯ ಬೈಂದೂರು ಉಪಸ್ಥಿತರಿದ್ದರು.







