ಸಚಿನ್ ತೆಂಡುಲ್ಕರ್, ಗವಾಸ್ಕರ್ ಗೆ ಮಾರ್ಗದರ್ಶಕರಾಗಿದ್ದ ಖ್ಯಾತ ಕ್ರಿಕೆಟ್ ಕೋಚ್ ವಸು ಪರಾಂಜಪೆ ನಿಧನ

photo: twitter
ಮುಂಬೈ, ಆ.30: ವಸು ಪರಾಂಜಪೆ ಎಂದು ಕರೆಯಲ್ಪಡುತ್ತಿದ್ದ ಖ್ಯಾತ ಕ್ರಿಕೆಟ್ ಕೋಚ್ ವಸುದೇವೊ ಜಗನ್ನಾಥ್ ಪರಾಂಜಪೆ ಸೋಮವಾರ ಮಧ್ಯಾಹ್ನ ಮಾಟುಂಗಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಇವರು ಭಾರತದ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸುನೀಲ್ ಗವಾಸ್ಕರ್ ಹಾಗೂ ದಿಲಿಪ್ ವೆಂಗ್ ಸರ್ಕಾರ್ ಮೇಲೆ ಭಾರೀ ಪ್ರಭಾವ ಬೀರಿದ್ದರು.
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಪರಾಂಜಪೆ ಅವರಿಗೆ 82 ವರ್ಷ ವಯಸ್ಸಾಗಿತ್ತು. ತನ್ನ ಪತ್ನಿ ಲಲಿತಾ ಪರಾಂಜಪೆ ಹಾಗೂ ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಮೂವರು ಮಕ್ಕಳನ್ನು ಅಗಲಿದ್ದಾರೆ. ಪುತ್ರ ಜತಿನ್ ಪರಾಂಜಪೆ ಭಾರತದ ಮಾಜಿ ಬ್ಯಾಟ್ಸ್ ಮನ್ ಹಾಗೂ ಮಾಜಿ ರಾಷ್ಟ್ರೀಯ ಆಯ್ಕೆಗಾರರಾಗಿದ್ದಾರೆ.
ಪರಾಂಜಪೆ ಮುಂಬೈ ಪರ 28 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 785 ರನ್ ಗಳಿಸಿದ್ದರು. ಇದರಲ್ಲಿ ತಲಾ 2 ಶತಕ ಹಾಗೂ ಅರ್ಧಶತಕಗಳಿವೆ. ತೆಂಡುಲ್ಕರ್, ಗವಾಸ್ಕರ್ ಹಾಗೂ ಸಂಜಯ್ ಮಾಂಜ್ರೇಕರ್ ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಪರಾಂಜಪೆ ಮಾರ್ಗದರ್ಶನ ನೀಡಿದ್ದರು. ಗವಾಸ್ಕರ್ ಹಾಗೂ ವೆಂಗ್ ಸರ್ಕಾರ್ ದಾದರ್ ಯೂನಿಯನ್ ಕ್ಲಬ್ ನಲ್ಲಿ ಪರಾಂಜಪೆ ನಾಯಕತ್ವದಲ್ಲಿ ಆಡಿದ್ದರು.
ಪರಾಂಜಪೆ 1980ರಲ್ಲಿ ಬಿಸಿಸಿಐ ಕೋಚಿಂಗ್ ನಿರ್ದೇಶಕರಾಗಿದ್ದರು. ಚೆನ್ನೈನ ಎಂಆರ್ ಎಫ್ ಪೇಸ್ ಅಕಾಡಮಿ ಹಾಗೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಕೋಚ್ ಆಗಿದ್ದರು.







