ಉಡುಪಿ: ಕೋವಿಡ್ಗೆ 3 ಬಲಿ; 98 ಮಂದಿಗೆ ಕೊರೋನ ಪಾಸಿಟಿವ್
![ಉಡುಪಿ: ಕೋವಿಡ್ಗೆ 3 ಬಲಿ; 98 ಮಂದಿಗೆ ಕೊರೋನ ಪಾಸಿಟಿವ್ ಉಡುಪಿ: ಕೋವಿಡ್ಗೆ 3 ಬಲಿ; 98 ಮಂದಿಗೆ ಕೊರೋನ ಪಾಸಿಟಿವ್](https://www.varthabharati.in/sites/default/files/images/articles/2021/08/30/304639-1630338682.jpg)
ಉಡುಪಿ, ಆ.30: ಸೋಮವಾರ ಜಿಲ್ಲೆಯಲ್ಲಿ ಮೂವರು ಕೋವಿಡ್ಗೆ ಬಲಿಯಾಗಿದ್ದಾರೆ. ಆದರೆ ಕೋವಿಡ್ಗೆ ಪಾಸಿಟಿವ್ ಬಂದವರ ಸಂಖ್ಯೆ 98ಕ್ಕೆ ಇಳಿದಿದೆ. ಇಂದು 118 ಮಂದಿ ಸೋಂಕಿನಿಂದ ಚೇತರಿಸಿಕೊಂಡರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 1523ಕ್ಕಿಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಉಡುಪಿ ತಾಲೂಕಿನ ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ನಿಂದ ಮೃತ ಪಟ್ಟವರ ಪಟ್ಟಿಗೆ ಸೇರಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿನಿಂದ ಮೃತರಾದವರ ಸಂಖ್ಯೆ 452ಕ್ಕೇರಿದೆ. 79ವರ್ಷ ಪ್ರಾಯದ ಮಹಿಳೆ ಹಾಗೂ 69 ಮತ್ತು 52 ವರ್ಷ ಪ್ರಾಯದ ಪುರುಷರು ಮೃತಪಟ್ಟವರು. ಇಬ್ಬರು ರವಿವಾರ ಹಾಗೂ ಮಹಿಳೆ ಶನಿವಾರ ಮೃತಪಟ್ಟರು.
ಇಂದು ಕೊರೋನ ಸೋಂಕು ದೃಢಪಟ್ಟ 98 ಮಂದಿಯಲ್ಲಿ 41 ಮಂದಿ ಪುರುಷರು ಹಾಗೂ 57 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 51 ಮಂದಿ ಉಡುಪಿ ತಾಲೂಕು, 28 ಮಂದಿ ಕುಂದಾಪುರ ಹಾಗೂ 17 ಮಂದಿ ಕಾರ್ಕಳ ತಾಲೂಕಿನವರು. ಇವರಲ್ಲಿ 17 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 81 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ರವಿವಾರ 118 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 71,768ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 7872 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 73,743ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 9,58,424 ಮಂದಿಯನ್ನು ಕೋವಿಡ್ ಪರೀಕ್ಷೆ ಗೊಳಪಡಿಸಲಾಗಿದೆ.
ಜಿಲ್ಲೆಯಲ್ಲಿ ಇಂದು ಯಾರೂ ಬ್ಲ್ಯಾಕ್ ಫಂಗಸ್ ಸೋಂಕಿನ ಚಿಕಿತ್ಸೆಗೆ ದಾಖಲಾಗಿಲ್ಲ. ಸದ್ಯ ಹೊರಜಿಲ್ಲೆಗಳ ಇಬ್ಬರು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.